ಪ್ರೇಕ್ಷಕರ ಮನ ಗೆದ್ದ ಡ್ರೋನ್ ಪ್ರದರ್ಶನ

mysore
Published on

ಮೈಸೂರು: ನಭದಲ್ಲಿ ವರ್ಣರಂಜಿತ ಚಿತ್ತಾರ ಬಿಡಿಸಿ ನೋಡುಗರ ಕಣ್ಮನ ಸೆಳೆದಿದ್ದ ಡ್ರೋನ್ ಪ್ರದರ್ಶನ 2ನೇ ದಿನವೂ ಪ್ರೇಕ್ಷಕರನ್ನು ಮನರಂಜಿಸಿತು.

ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್) ವತಿಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸೋಮವಾರ ಸಂಜೆ ನಡೆದ 2ನೇ ದಿನ ಡ್ರೋನ್ ಪ್ರದರ್ಶನಕ್ಕೂ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಸಹಸ್ರಾರು ಜನರು ಕಿಕ್ಕಿರಿದು ತುಂಬಿದ್ದ ಮೈದಾನದಲ್ಲಿ 3000 ಡ್ರೋನ್‌ಗಳು ಆಕಾಶದಲ್ಲಿ ವಿವಿಧ ಕಲಾಕೃತಿಗಳ ಬಣ್ಣಬಣ್ಣದ ಚಿತ್ತಾರ ಬಿಡಿಸುವ ಮೂಲಕ ಎಲ್ಲರನ್ನು ಚಕಿತಗೊಳಿಸಿದವು.

ಏಕಕಾಲದಲ್ಲಿ ಆಗಸಕ್ಕೆ ಲಗ್ಗೆ ಹಾಕಿದ ಡ್ರೋನ್‌ಗಳು ಬಣ್ಣಬಣ್ಣದ ದೀಪಗಳಿಂದ ಮಿನುಗುತ್ತಾ ಆಕರ್ಷಕ ಕಲಾಕೃತಿ ಅನಾವರಣಗೊಳಿಸಿದವು. ಸೌರಮಂಡಲ, ವಿಶ್ವಭೂಪಟ, ದೇಶದ ಹೆಮ್ಮೆಯ ಸೈನಿಕ, ನವಿಲು,

ರಾಷ್ಟ್ರೀಯ ಪ್ರಾಣಿ ಹುಲಿ, ಡಾಲ್ಫಿನ್, ಹದ್ದು, ಸರ್ಪದ ಮೇಲೆ ಶ್ರೀಕೃಷ್ಣ ನರ್ತನ, ಕಾವೇರಿ ಮಾತೆ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರದೊಂದಿಗೆ ಪಂಚ ಗ್ಯಾರಂಟಿ ಯೋಜನೆಗಳಿಂದ ಕೂಡಿದ್ದ ಕರ್ನಾಟಕ ಭೂಪಟ, ಅಂಬಾರಿ ಆನೆ, ನಾಡದೇವತೆ ಚಾಮುಂಡೇಶ್ವರಿ ಕಲಾಕೃತಿಗಳು ನೋಡುಗರಿಗೆ ಹರ್ಷೋಲ್ಲಾಸ ಉಂಟು ಮಾಡಿದವು.

ಇದಕ್ಕೂ ಮುನ್ನ ಐಗಿರಿ ನಂದಿನಿ ಗೀತೆಯೊಂದಿಗೆ ಸಂಗೀತ ಸಂಜೆಗೆ ಗಾಯಕಿ ದಿವ್ಯಾ ರಾಮಚಂದ್ರ ಅವರು ಅದ್ಭುತ ಆರಂಭ ನೀಡಿದರು.

ಗಿಲ್ಲಕ್ಕೋ ಶಿವ ಗಿಲ್ಲಕ್ಕೋ, ಪಸಂದಾಗವ್ನೆ ಸೇರಿದಂತೆ ಇತರ ಹಾಡುಗಳನ್ನು ಹಾಡಿ ಎಲ್ಲರನ್ನೂ ಆಕರ್ಷಿಸಿದರು. ಬಳಿಕ ಮೈಸೂರಿನ ಶ್ರೀಹರ್ಷ ಅವರು ಗೊಂಬೆ ಹೇಳುತೈತೆ, ಶ್ರೀರಾಮನ ಕುರಿತು ಗೀತೆಗೆ ಮೈದಾನದಲ್ಲಿ ಸೇರಿದ್ದ ಜನರೆಲ್ಲ ಧ್ವನಿಗೂಡಿಸಿ ಹಾಡಿದರು.

‘ಅಪ್ಪ ಐ ಲವ್ ಯೂ’ ಹಾಡಿನೊಂದಿಗೆ ವೇದಿಕೆಗೆ ಬಂದ ಗಾಯಕಿ ಅನುರಾಧ ಭಟ್, ‘ಕಣ್ಣು ಹೊಡೆಯಾಕ್ಕಾ’ ಗೀತೆಯನ್ನು ಹಾಡಿ ಸಂಗೀತಸುಧೆ ಹರಿಸಿದರು. ಇವರಿಗೆ ಧ್ವನಿಯಾದ ಗಾಯಕ ಜಸ್ಕರಣ್ ಸಿಂಗ್, ದ್ವಾಪರ ದಾಟುತ, ನಿನ್ನ ಜತೆಗೆ ನನ್ನ ಕಥೆ ಹಾಡಿಗೆ ಉತ್ತಮ ಸಾಥ್ ಕೊಟ್ಟರು

ಇದೇ ವೇಳೆ ಡ್ರೋನ್ ಪ್ರದರ್ಶನಕ್ಕೆ ಸಚಿವರಾದ ಕೆ.ವೆಂಕಟೇಶ್, ಶಾಸಕರು ಹಾಗೂ ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ಶಾಸಕ ಡಿ. ರವಿಶಂಕರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು, ತಾಂತ್ರಿಕ ನಿರ್ದೇಶಕ ಡಿ.ಜೆ. ದಿವಾಕರ್, ಅಧೀಕ್ಷಕ ಇಂಜಿನಿಯರ್ ಸುನೀಲ್, ದಸರಾ ದೀಪಾಲಂಕಾರ ಸಮಿತಿ ಅಧ್ಯಕ್ಷ (ಅಧಿಕಾರೇತರ) ರಾಘವೇಂದ್ರ ಸೇರಿದಂತೆ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net