ವಿಜಯಪುರ: ಚಿತ್ರಕಲಾ ಶಿಕ್ಷಕರನ್ನು ತುಂಬುವಲ್ಲಿ ಸರ್ಕಾರ ತತ್ಸಾರ ಮನೋಭಾವ ತೋರುತ್ತಿದೆ ಎಂದು ನಿವೃತ ಚಿತ್ರಕಲಾ ಶಿಕ್ಷಕ ಪಿ.ಎಸ್. ಕಡೆಮನಿ ಹೇಳಿದರು.
ನಗರದ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸತಿ ಇಲಾಖೆ ಮತ್ತು ವರ್ಣಮಹಲ್ ಸಂ ಸಂಸ್ಥೆ ಸಹಯೋಗದಲ್ಲಿ ಮೂರು ದಿನಗಳವರೆಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಚಿತ್ರಕಲಾ ಪ್ರದರ್ಶನವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.
ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವಲ್ಲಿ ಸರ್ಕಾರ ಇನ್ನು ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ ಎಂದು ಸಲಹೆ ನೀಡಿದರು.
ಹಿರಿಯ ಕಲಾವಿದ ಸುಭಾಷ್ ಕೆಂಭಾವಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಾ ಪ್ರದರ್ಶನಗಳಲ್ಲಿ ಕಲಾವಿದರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯೆ ರಾಜೇಶ್ವರಿ ಮೋಪಗಾರ, ಅತಿಥಿ ನಿವೃತ ಶಿಕ್ಷಕ ಮೋಹನ ನಾಯಕ್ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ವಿಜಯ ನಾಯಕ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಹದೇವಪ್ಪ ಮೋಪಗಾರ ನಿರೂಪಿಸಿದರು. ವಿಜಯ ನಾಯಕ್ ವಂದಿಸಿದರು.