

ಹಾಸನ: ಮೊದಲು ಮದುವೆ ನಿಶ್ಚಯವಾಗಿ ಕೊನೆಗೆ ಮದುವೆಗೆ ಯುವತಿ ನಿರಾಕರಿಸಿದ ಕಾರಣಕ್ಕೆ ಆಲೂರಿನಲ್ಲಿ ಯುವತಿ ಮೇಲೆ ಕೊಲೆ ಯತ್ನ ನಡೆದಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ ಎಂದು ಎಸ್ಪಿ ಮೊಹಮ್ಮದ್ ಸುಜೀತಾ ಹೇಳಿದರು.
ಆಲೂರು ತಾಲೂಕಿನ ಕಾರುಗೋಡು ಗ್ರಾಮದ ಮೋಹಿತ್ ಮತ್ತು ಗಾನವಿ ಪ್ರೀತಿ ಮಾಡುತ್ತಿದ್ದರು. ನಂತರ ಮೋಹಿತ್‌ನಿಂದ ಕೆಲ ದಿನಗಳಿಂದ ಗಾನವಿ ಅಂತರವನ್ನು ಕಾಯ್ದುಕೊಂಡಿದ್ದಳು. ಆದರೂ ಮದುವೆ ಆಗುವಂತೆ ಮೋಹಿತ್ ಒತ್ತಾಯ ಮಾಡುತ್ತಿದ್ದ. ಮೋಹಿತ್ ಕಾಟದ ಬಗ್ಗೆ ಗಾನವಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಳು. ಯಾರ ತಂಟೆಗೂ ಯಾರು ಬರದಂತೆ ಎರಡು ಕುಟುಂಬಗಳು ಮಾತುಕತೆ ನಟಿಸಿದ್ದವು. ಗ್ರಾಮಸ್ಥರ ಜೊತೆಗೆ ಮುಚ್ಚಳಿಕೆ ತಯಾರಿಯಲ್ಲಿ ಕುಟುಂಬಗಳು ಇದ್ದವು. ಈ ವೇಳೆ ಪಟ್ಟಣ ಪಂಚಾಯಿತಿ ಮುಂಭಾಗ ನಿಂತಿದ್ದ ಗಾನವಿಯ ಮೇಲೆ ಮೋಹಿತ್ ಮಾರಕಾಸ್ತ್ರಗಳಿಂದ ಕೊಲೆಗೆ ಯತ್ನಿಸಿದ್ದಾನೆ.
ಈ ಸಂದರ್ಭದಲ್ಲಿ ಗಾನವಿಯ ತಲೆ, ಕೈಗಳಿಗೆ ತೀವ್ರವಾಗಿ ಗಾಯವಾಗಿದ್ದು, ಕೂಡಲೇ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ತನಿಖಾ ಹಂತದಲ್ಲಿದೆ ಎಂದರು.