ಪ್ರೀತಿಯ ಹೆಸರಲ್ಲಿ ಮೋಸ, ನಗ್ನ ಚಿತ್ರ ಪಡೆದು ಜಾಲತಾಣದಲ್ಲಿ ಪೋಸ್ಟ್, ಯುಪಿ ಖದೀಮನ ಬಂಧನ

IMG-20210408-WA0075
Published on

ವಿಜಯಪುರ: ಪ್ರೀತಿಯ ಹೆಸರಲ್ಲಿ ಯುವತಿಯ ನಗ್ನ ಫೋಟೊ ಪಡೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ ಖದೀಮನನ್ನು ಪೊಲೀಸರು ಹೆಡೆಮುರಿ ಕಟ್ಟಿ ತಂದಿದ್ದಾರೆ.

ಉತ್ತರ ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿ ದೆಹಲಿಗೆ ಕರೆದೊಯ್ದು ಅಲ್ಲಿಂದ ವಿಮಾನದ ಮೂಲಕ ಹೈದ್ರಾಬಾದ್‌ಗೆ ಕರೆತಂದು ಅಲ್ಲಿಂದ ವಿಜಯಪುರಕ್ಕೆ ತಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಮೂಲಕ ಪೊಲೀಸರು ಬಿರುಸಿನ ಕಾರ್ಯಾಚರಣೆ ನಡೆಸಿದ್ದಾರೆ.

ಉತ್ತರಾಖಂಡದ ಆಲಮೋರಾ ಜಿಲ್ಲೆಯ ಭನೋಲಿ ತಾಲೂಕಿನ ಡುಂಗ್ರಾ ಗ್ರಾಮದ ನಿವಾಸಿ ರಾಜೇಂದ್ರಸಿಂಗ್ ಜೀವನಸಿಂಗ್ ಬಿಷ್ಟ (21) ಬಂಧಿತ ಆರೋಪಿ. ಪ್ರಸ್ತುತ ಈತ ಉತ್ತರ ಪ್ರದೇಶದಲ್ಲಿ ನೆಲೆಸಿದ್ದನು. ಸದರಿ ಆರೋಪಿ ವಿಜಯಪುರದ ಯುವತಿಗೆ ನಂಬಿಸಿ, ಪ್ರೀತಿಸುವಂತೆ ನಟಿಸಿ ಯುವತಿಯಿಂದ ನಗ್ನ ಫೋಟೊಗಳನ್ನು ಪಡೆದುಕೊಂಡು ಹಾಗೂ ಜಿ-ಮೇಲ್ ಅಕೌಂಟ್ ಪಡೆದು ಜಿ-ಮೇಲ್‌ನಲ್ಲಿರುವ ಸ್ಥಳೀಯರ ಫೋನ್ ನಂಬರ್‌ಗಳಿಗೆ ವಾಟ್ಸ್‌ಪ್ ಮತ್ತು ಇನ್‌ಸ್ಟಾಗ್ರಾಂ ಮೂಲಕ ಕಳುಹಿಸುತ್ತಿದ್ದನು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಎಸ್‌ಪಿ ಅನುಪಮ ಅಗರವಾಲ್ ಹಾಗೂ ಎಎಸ್‌ಪಿ ರಾಮ ಅರಸಿದ್ದಿ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯಾದ ಸುರೇಶ. ಸಿ. ಬೆಂಡೆಗುಂಬಳ, ಆರ್.ವಿ. ನಾಯಿಕ, ಎ.ಎಲ್. ದೊಡ್ಡಮನಿ, ಎಂ.ಎಂ. ಕುರುವಿನಶೆಟ್ಟಿ, ಪಿ.ಎಂ. ಪಾಟೀಲ, ಎಸ್.ವಿ. ಮಲಘಾಣ, ಎಸ್.ಐ. ಹೆಬ್ಬಾಳಟ್ಟಿ, ಎಂ.ಎಚ್. ಖಾನೆ, ಎಂ.ಬಿ. ಪಾಟೀಲ, ಎಸ್.ಆರ್. ಬಡಚಿ, ಐ.ಆರ್. ಪಟ್ಟಣಶೆಟ್ಟಿ, ಎಂ.ಎಂ. ಅಂಬಿಗೇರ, ಡಿ.ಆರ್. ಪಾಟೀಲ, ಎಸ್.ಆರ್. ಉಮನಾಬಾದಿ, ಕೆ.ಜೆ. ರಾಠೋಡ, ಎ.ಎಚ್. ಪಾಟೀಲ ಕಾರ್ಯಾಚರಣೆ ನಡೆಸಿದ್ದರು. ಉತ್ತರ ಪ್ರದೇಶದ ಘಾಜಿಯಾಬಾದ್‌ನಿಂದ ಆರೋಪಿಯನ್ನು ಹೆಡೆಮುರಿ ಕಟ್ಟಿ ತರುವಲ್ಲಿ ಸದರಿ ತಂಡ ಯಶಸ್ವಿಯಾಗಿದೆ ಎಂದು ತಿಳಿಸಿರುವ ಎಸ್‌ಪಿ ಅಗರವಾಲ್ ಯುವತಿಯರು ಇಂಥ ಕಿರಾತಕರಿಂದ ಎಚ್ಚರವಾಗಿರುವಂತೆ ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net