

ಚಾಮರಾಜನಗರ: ಆಧುನಿಕತೆಯ ಭರಾಟೆಯಲ್ಲಿ ಮಾನಸಿಕ ಒತ್ತಡಗಳಿಂದಾಗಿ ಸಂಬಂಧಗಳನ್ನು ದೂರವಾಗಿಸಿಕೊಳ್ಳುವ ಮನುಷ್ಯ ತನ್ನ ಜವಾಬ್ದಾರಿಯನ್ನುಮರೆಯುತ್ತಿದ್ದಾನೆ ಎಂದು ಚಾಮರಾಜನಗರ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಬಸವಣ್ಣ ಮೂಕಹಳ್ಳಿ ಹೇಳಿದರು.
ನಗರದ ಹೊರವಲಯದಲ್ಲಿರುವ ಚಾಮರಾಜನಗರ ವಿಶ್ವ ವಿದ್ಯಾಲಯದಲ್ಲಿ ಕನ್ನಡ ಮತ್ತು ಜಾನಪದ ವಿಭಾಗದ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳಿಂದ ವಿಶ್ವ ಮೈತ್ರಿ ಸ್ವಾಗತ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪ್ರೀತಿ, ಮೈತ್ರಿ ಹಾಗೂ ಕಾರುಣ್ಯದಂತ ನೈತಿಕ ಮೌಲ್ಯಗಳನ್ನು ಅಳವಡಿಸಕೊಳ್ಳಬೇಕಾಗುತ್ತದೆ. ಉತ್ತಮ ಮಟ್ಟದ ಜ್ಞಾನವನ್ನು ಸಂಪಾದಿಸಿಕೊಂಡು ತಮ್ಮ ಸ್ವಂತ ಸಾಮರ್ಥ್ಯದಿಂದ ತಮ್ಮ ಬದುಕುಗಳನ್ನು ಕಟ್ಟಿಕೊಳ್ಳಬೇಕಾದರೆ ನಿರಂತರವಾದ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ ಎಂದರು.
ಜಾನಪದ ವಿಭಾಗದ ಮುಖ್ಯಸ್ಥ ಡಾ. ಶಿವರಾಜ್ ಮಾತನಾಡಿ, ವಿದ್ಯಾರ್ಥಿಗಳು ಬಹುಮುಖ ಪ್ರತಿಭೆಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಸಾಂಸ್ಕೃತಿಕವಾಗಿಯೂ ತಮ್ಮನ್ನು ತಾನು ಗುರುತಿಸಿಕೊಳ್ಳಬೇಕಾದರೆ ವಿಶ್ವಮೈತ್ರಿ ಎಂಬ ಶೀರ್ಷಿಕೆಯಲ್ಲಿ ಆಗುತ್ತಿರುವ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಕೃಷ್ಣಮೂರ್ತಿ ಹನೂರು ಮಾತನಾಡಿ,
ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಜತೆಗೆ ತಮ್ಮ ಬದುಕಿನ ಬಗೆಗೂ ಹೆಚ್ಚಿನ ಗಮನಹರಿಸಬೇಕು. ವಿಶ್ವಾತ್ಮಕ ಹಾಗೂ ವಿಶ್ವಾಸಾತ್ಮಕ ಜೀವನ ಮೌಲ್ಯವನ್ನು ರೂಢಿಸಿಕೊಳ್ಳಬೇಕಾದರೆ ಜಾನಪದ ಅಧ್ಯಯನದ ಜೊತೆಗೆ ಸಾಹಿತ್ಯದ ಅಧ್ಯಯನವನ್ನು ಮಾಡಬೇಕು ಇದರಿಂದಾಗಿ ಮಾನವೀಯ ಮೌಲ್ಯಗಳ ಬೆಳವಣಿಗೆ ಆಗುತ್ತದೆ ಎಂದು ತಿಳಿದರು. ಇದೇ ಸಂದರ್ಭದಲ್ಲಿ 2023-24 ನೇ ಸಾಲಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಚಿನ್ನದ ಪದಕ ಪಡೆದ ವಿದ್ಯಾರ್ಥಿ ಗುರುರಾಜು ಅವರನ್ನು ಅಭಿನಂಧಿಸಲಾಯಿತು. ಅಧ್ಯಾಪಕರಾದ ಡಾ.ಮಹೇಶ್‌ಬಾಬು, ಗುರುರಾಜು, ಪಿ.ರಾಣಿ, ಡಾ. ಶಶಿಕಲಾ, ಡಾ.ಜಗದೀಶ್, ಡಾ.ಮಹೇಶ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.