ಪ್ರೀತಂ ಗೌಡರಿಂದ ಮೈತ್ರಿ ಧರ್ಮದ ಪಾಠ ಕಲಿಯಬೇಕಿಲ್ಲ: ಎಸ್.ದ್ಯಾವೇಗೌಡ ತಿರುಗೇಟು

ಪ್ರೀತಂ ಗೌಡರಿಂದ ಮೈತ್ರಿ ಧರ್ಮದ ಪಾಠ ಕಲಿಯಬೇಕಿಲ್ಲ: ಎಸ್.ದ್ಯಾವೇಗೌಡ ತಿರುಗೇಟು
Published on

ಹಾಸನ: ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲನೆ ಮಾಡದೆ ಪಕ್ಷದ ವರಿಷ್ಠರ ಮಾತಿಗೂ ಬೆಲೆ ಕೊಡದ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಅವರಿಂದ ನಮ್ಮ ಪಕ್ಷ ಮೈತ್ರಿ ಧರ್ಮದ ಬಗ್ಗೆ ಪಾಠ ಕಲಿಯಬೇಕಾಗಿಲ್ಲ ಎಂದು ಜೆಡಿಎಸ್ ತಾಲೂಕು ಜೆಡಿಎಸ್ ಅಧ್ಯಕ್ಷ ಎಸ್.ದ್ಯಾವೇಗೌಡ ಟಾಂಗ್ ನೀಡಿದರು.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಆಗಿ ಹಾಸನ ನಗರಸಭೆಯಲ್ಲಿ ಚುನಾವಣೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನವನ್ನ ಹಂಚಿಕೆ ಮಾಡಿಕೊಳ್ಳಲಾಗಿದೆ. ಬಿಜೆಪಿಯ ಸ್ಥಳೀಯ ಮುಖಂಡರು ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರು ಹಾಸನದ ಶಾಸಕರನ್ನು ಸೌಜನ್ಯಕ್ಕೂ ಮಾತನಾಡದೆ, ಕೇವಲ ಪತ್ರಿಕಾಗೋಷ್ಠಿಯ ಮೂಲಕ ಹೇಳಿಕೆ ನೀಡಿದ್ದಾರೆ. ನಾವು ಮೈತ್ರಿ ಧರ್ಮವನ್ನು ಪಾಲಿಸಿದ್ದೇವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.
ಮೈತ್ರಿ ಧರ್ಮ ಪಾಲನೆ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ವರಿಷ್ಠರು ಮತ್ತು ಶಾಸಕರು ಅಧ್ಯಕ್ಷರನ್ನಾಗಿ ನಮ್ಮ ಪಕ್ಷದ ಚಂದ್ರೇಗೌಡರನ್ನು ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ಲತಾದೇವಿ ಸುರೇಶ್ ಅವರನ್ನು ಆಯ್ಕೆ ಮಾಡಿದ್ದೇವೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎನ್‌ಡಿಎ ಅಭ್ಯರ್ಥಿ ಪರ ಪ್ರಚಾರ ಮಾಡದೆ ಮೈಸೂರಿನಲ್ಲಿ ಉಳಿದುಕೊಂಡು ಎಂದು ಮೈತ್ರಿ ಧರ್ಮವನ್ನು ಉಲ್ಲಂಘನೆ ಮಾಡಿದವರು ಪ್ರೀತಂ ಗೌಡ. ಲೋಕಸಭೆ ಚುನಾವಣೆಯಲ್ಲಿ ಪ್ರೀತಂ ಗೌಡ ಹಾಗೂ ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಅವರು ಮೈತ್ರಿಧರ್ಮ ಪಾಲನೆ ಮಾಡಲಿಲ್ಲ. ಕಾಂಗ್ರೆಸ್‌ಗೆ ಮತ ಹಾಕಿ ಎಂದು ಅವರು ನೇರವಾಗಿಯೇ ತಮ್ಮ ಬೆಂಬಲಿಗರಿಗೆ ಹೇಳಿದ್ದರು. ಅವರ ಬೆಂಬಲಿಗರು ಕಾಂಗ್ರೆಸ್ ಪರವಾಗಿಯೇ ಪ್ರಚಾರ ನಡೆಸಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಗ ಸಂಸದ ಶ್ರೇಯಸ್ ಪಟೇಲ್ ಅವರು ಹಾಸನ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಕೆಲಸ ಮಾಡುವುದಾದರೂ ಕಾಂಗ್ರೆಸ್ ನಾಯಕರ ಬದಲು ಪ್ರೀತಂ ಗೌಡ ಅವರ ಸಲಹೆ ಪಾಲಿಸುತ್ತಾರೆ ಎಂದು ಕಾಂಗ್ರೆಸ್ಸಿಗರೇ ಹೇಳುತ್ತಿದ್ದಾರೆ. ಅವರಿಂದ ನಾವು ಮೈತ್ರಿ ಧರ್ಮ ಕಲಿಯಬೇಕಿಲ್ಲ. ‘ಸಾಂದರ್ಭಿಕ ಶಾಸಕರು’ ಎಂದು ಹೇಳುವ ಮಾಜಿ ಶಾಸಕರು 2019ರಲ್ಲಿ ನಡೆದ ಚುನಾವಣೆಯಲ್ಲಿ ಆಕಸ್ಮಿಕವಾಗಿ ಗೆದ್ದು ಶಾಸಕರಾದ ಅವರು ಈ ಹೇಳಿಕೆಯಿಂದ ಪ್ರಜಾಪ್ರಭುತ್ವಕ್ಕೆ ಮತ್ತು ಕ್ಷೇತ್ರದ ಮತದಾರರಿಗೆ ಅಪಮಾನ ಮಾಡಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ನಗರಸಭೆ ಸದಸ್ಯರಾದ ಸಯ್ಯದ್ ಅಕ್ಬರ್, ಕ್ರಾಂತಿ, ಮುಖಂಡರಾದ ಬಿದರಿಕೆರೆ ಜಯರಾಮ್, ರಘು ಹೊಂಗೆರೆ, ಜಯರಾಮ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net