ಪ್ರೀತಂ ಗೌಡ ಬೆಂಬಲಿಗರಿಂದ ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಐನೆಟ್ ವಿಜಿ ಮೇಲೆ ಹಲ್ಲೆ :ಆರೋಪ

ಪ್ರೀತಂ ಗೌಡ ಬೆಂಬಲಿಗರಿಂದ ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಐನೆಟ್ ವಿಜಿ ಮೇಲೆ ಹಲ್ಲೆ :ಆರೋಪ
Published on

ಹಾಸನ: ಆರ್‌ಎಸ್‌ಎಸ್ ಕಾರ್ಯಕರ್ತ ಹಾಗೂ ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಐನೆಟ್ ವಿಜಿ ಕುಮಾರ್ ಹಾಗೂ ಅವರ ಇಬ್ಬರು ಸ್ನೇಹಿತರ ಮೇಲೆ ಸುಮಾರು 40 ಜನ ಅಗಂತುಕರು ಶುಕ್ರವಾರ ಬೆಳಗ್ಗೆ 11.30ಕ್ಕೆ ಹಲ್ಲೆ ನಡೆಸಿ, ಕಚೇರಿಯ ವಸ್ತು, ಗಾಜುಗಳನ್ನೆಲ್ಲಾ ಪುಡಿ ಪುಡಿ ಮಾಡಿದ್ದಾರೆ. ಹಲ್ಲೆಗೊಳಗಾದ ಮೂವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶುಕ್ರವಾರ ಬೆಳಗ್ಗೆ 11:30 ಸಮಯದಲ್ಲಿ ನಗರದ ಎಂಜಿ ರಸ್ತೆಯಲ್ಲಿರುವ ಐನೆಟ್ ಕಂಪ್ಯೂಟರ್ ಸೆಂಟರ್ ಕಚೇರಿಗೆ ನುಗ್ಗಿದ ಸುಮಾರು 18 ರಿಂದ 22 ವಯಸ್ಸಿನ 40ಕ್ಕೂ ಹೆಚ್ಚು ಜನರಿದ್ದ ತಂಡ ವಿಜಿ ಕುಮಾರ್ ಅವರನ್ನು ಅಂಗಡಿಯಿಂದ ಹೊರಗೆ ಎಳೆದುಕೊಂಡು ಬಂದು ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೆ ಕಚೇರಿಯನ್ನು ಸಂಪೂರ್ಣವಾಗಿ ಜಖಂ ಮಾಡಿದ್ದಾರೆ. ದಾಳಿಯಿಂದ ವಿಜಿ ಅವರನ್ನು ಬಿಡಿಸಿಕೊಳ್ಳಲು ಹೋದಂತಹ ಸ್ನೇಹಿತರಾದ ಪ್ರಮೋದ್ ಮತ್ತು ಸಂದೇಶ್ ಅವರ ಮೇಲೆಯೂ ಕೂಡ ಕಿಡಿಗೇಡಿಗಳ ಗುಂಪು ಹಲ್ಲೆ ಮಾಡಿ ಪರಾರಿಯಾಗಿದೆ.
ಕಿಡಿಗೇಡಿಗಳ ಗುಂಪು ಹಲ್ಲೆ ಮಾಡುವಾಗ ‘ಪ್ರೀತಂಗೌಡರ ವಿರುದ್ಧ ಮಾತನಾಡುತ್ತೀಯಾ’ ಎಂದು ಹೇಳಿಕೊಂಡು ವಿಜಿ ಅವರನ್ನು ಹಿಗ್ಗಾಮುಗ್ಗಾ ಥಳಿಸಿ ಅಲ್ಲಿಂದ ಪರಾದಿಯಾಗಿದೆ. ತಕ್ಷಣವೇ ಅಲ್ಲಿದ್ದ ಅಕ್ಕಪಕ್ಕದ ಅಂಗಡಿಯ ಸ್ನೇಹಿತರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಘಟನಾ ಸ್ಥಳಕ್ಕೆ ಎಎಸ್‌ಪಿ ವೆಂಕಟೇಶ್ ನಾಯ್ಡು ಹಾಗೂ ಇನ್ಸ್‌ಪೆಕ್ಟರ್‌ಗಳಾದ ಮೋಹನ್ ಕೃಷ್ಣ ಮತ್ತು ಸ್ವಾಮಿನಾಥನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಲ್ಲೆಯ ವಿಚಾರ ತಿಳಿದ ತಕ್ಷಣ ಐನೆಟ್ ವಿಜಿ ಅವರ ಸ್ನೇಹಿತರು ಸಾಕಷ್ಟು ಸಂಖ್ಯೆಯಲ್ಲಿ ಅಂಗಡಿಯ ಮುಂದೆ ಜಮಾಯಿಸಿ, ಇದಕ್ಕೆ ಸೂಕ್ತ ನ್ಯಾಯ ಒದಗಿಸಿಕೊಡಬೇಕು. ಹಲ್ಲೆ ಬಗ್ಗೆ ಮೊದಲೇ ಸೂಚನೆ ಇತ್ತು. ಈ ವಿಷಯವನ್ನು ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಕೂಡ ತಿಳಿಸಿದ್ದೆವು, ಘಟನೆ ಬಗ್ಗೆ ಸೂಕ್ತ ತನಿಖೆಯಾಗಿ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ಆರೋಪ:
ಆಸ್ಪತ್ರೆಗೆ ದಾಖಲಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ವಿಜಿ ಕುಮಾರ್ ಅವರು, ಬೆಳಗ್ಗೆ ನಾನು ನನ್ನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಯುವಕರ ಗುಂಪು ಆಗಮಿಸಿ ನನ್ನ ಹೆಸರನ್ನು ಕೇಳಿದರು. ಅದಕ್ಕೆ ನಾನು ವಿಜಿ ಕುಮಾರ್ ಎಂದು ಹೇಳಿದೆ. ಕೂಡಲೇ ನನ್ನ ಮೇಲೆ ಹಲ್ಲೆ ಮಾಡಿದರು. ಬಳಿಕ ನನ್ನನ್ನು ಕಚೇರಿಯಿಂದ ಹೊರಗೆ ಎಳೆದುಕೊಂಡು ಬಂದು ಥಳಿಸಿದರು. ಥಳಿಸುವಾಗ ‘ಪ್ರೀತಂ ಗೌಡರ ವಿರುದ್ಧ ಮಾತನಾಡುತ್ತಿಯಾ’ ಎಂದು ಹೇಳಿ ಹಲ್ಲೆ ಮಾಡಿದರು. ನಂತರ ನನ್ನ ಕಚೇರಿಯ ಗಾಜುಗಳನ್ನೆಲ್ಲಾ ಒಡೆದು ಹಾಕಿದರು. ಬಿಜೆಪಿಯ ಯಾವ ಕಾರ್ಯಕರ್ತರು ಇಂತಹ ಕೆಲಸ ಮಾಡುವುದಿಲ್ಲ. ಇದು ಪ್ರೀತಂ ಗೌಡ ಕಡೆಯವರೇ ನಡೆಸಿರುವ ಕೃತ್ಯ ಎಂದು ನೇರವಾಗಿ ಆರೋಪ ಮಾಡಿದರು.

ಮೈತ್ರಿಗೆ ಕೈಜೋಡಿಸಿದ್ದಕ್ಕೆ ವಿರೋಧ:
ರಾಷ್ಟ್ರಮಟ್ಟದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಆದರೆ ಈ ಮೈತ್ರಿಗೆ ಬಿಜೆಪಿಯ ಕೆಲ ನಾಯಕರು ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಿದ್ದರು. ಐನೆಟ್ ವಿಜಿ ಅವರು ಮೈತ್ರಿ ಪಾಲನೆಗಾಗಿ ಯಾವುದೇ ವಿರೋಧ ವ್ಯಕ್ತಪಡಿಸದೆ ಮೈತ್ರಿ ಪರ ಕೆಲಸ ಮಾಡುತ್ತಿದ್ದರು. ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ವಿಜಿ ಅವರ ಮನೆಗೆ ಹೋಗಿ ಮಾತುಕತೆ ಮಾಡಿದ್ದರು. ಇದರಿಂದ ಕೆಲವರು ಆಕ್ರೋಶಗೊಂಡಿದ್ದರು ಮತ್ತು ಇತ್ತೀಚೆಗೆ ಕೆಲ ಟಿವಿ ವಾಹಿನಿಗೆ ಹೇಳಿಕೆ ನೀಡುವ ಸಂದರ್ಭದಲ್ಲಿ ಪ್ರೀತಂ ಗೌಡರ ವಿರುದ್ಧ ಮಾತನಾಡಿದ್ದರು ಎಂಬ ವಿಚಾರಕ್ಕಾಗಿ ಈ ಹಲ್ಲೆ ನಡೆದಿದೆ ಎಂದು ಅವರ ಸ್ನೇಹಿತರು ಆರೋಪಿಸುತ್ತಿದ್ದಾರೆ. ಅಲ್ಲದೇ ಈಗ ಅವರ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದೆ.
ಡಿಸಿ, ಎಸ್ಪಿ ಭೇಟಿ ಮಾಡಿದ ಶಾಸಕರು
ಹಲ್ಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರಾದ ಹುಲ್ಲಳ್ಳಿ ಸುರೇಶ್ ಮತ್ತು ಸ್ವರೂಪ್ ಪ್ರಕಾಶ್ ಅವರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿಯಾಗಿ ಹಲ್ಲೆಯ ಬಗ್ಗೆ ಸಮಗ್ರ ತನಿಖೆಯಾಗಬೇಕು. ಆರೋಪಿಗಳನ್ನು ತಕ್ಷಣವೇ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾಪ್ರಭುತ್ವದ ಕಗ್ಗೊಲೆ ಎಂದ ಹುಲ್ಲಳ್ಳಿ ಸುರೇಶ:
ಬಿಜೆಪಿ ಕಾರ್ಯಕರ್ತನ ಮೇಲೆ ಕಿಡಿಗೇಡಿಗಳು ದಾಳಿ ಮಾಡಿರುವುದು ನಿಜಕ್ಕೂ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಈ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಆರೋಪಿಗಳನ್ನು ಬಂಧಿಸಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಬೇಲೂರು ಬಿಜೆಪಿ ಶಾಸಕ ಹುಲ್ಲಳ್ಳಿ ಸುರೇಶ್ ಒತ್ತಾಯಿಸಿದರು.
ಆಸ್ಪತ್ರೆಗೆ ತೆರಳಿ ವಿಜಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಜಕ್ಕೂ ರಾಜಕಾರಣದಲ್ಲಿ ಆರೋಪ- ಪ್ರತ್ಯಾರೋಪಗಳು ಇರುತ್ತವೆ. ಆದರೆ ಈ ರೀತಿ ಹಲ್ಲೆ ಮಾಡುವಂತಹ ಮನಸ್ಥಿತಿ ಇರಬಾರದು. ಇದನ್ನು ಯಾರೇ ಮಾಡಿದರೂ ಕೂಡ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈಗಾಗಲೇ ಬಿಜೆಪಿಯ ಹೈಕಮಾಂಡ್ ಮತ್ತು ನಾಯಕರ ಜೊತೆ ಮಾತನಾಡಿದ್ದೇನೆ ಎಂದು ಹೇಳಿದರು.

ಹಲ್ಲೆ ಖಂಡನೀಯ:
ಹಾಸನ ನಗರ ರಾಜ್ಯದಲ್ಲೇ ಶಾಂತಿಪ್ರಿಯ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಇಂತಹ ಕ್ಷೇತ್ರದಲ್ಲಿ ಈ ರೀತಿ ಘಟನೆಗಳು ನಡೆದಿರುವುದು ನಿಜಕ್ಕೂ ಖಂಡನೀಯ ಎಂದು ಶಾಸಕ ಸ್ವರೂಪ್ ಪ್ರಕಾಶ್ ವಿಷಾದ ವ್ಯಕ್ತಪಡಿಸಿದರು.
ಆಸ್ಪತ್ರೆಗೆ ತೆರಳಿ ವಿಜಿ ಅವರ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ ಎಚ್.ಎಸ್. ಪ್ರಕಾಶ್ ಅವರು ನಾಲ್ಕು ಬಾರಿ ಶಾಸಕರಾಗಿದ್ದರು. ಹನುಮೇಗೌಡ, ಕರೀಗೌಡರು ಸೇರಿದಂತೆ ಹಲವು ರಾಜಕಾರಣಿಗಳು ಇಲ್ಲಿ ರಾಜಕಾರಣ ಮಾಡಿದ್ದಾರೆ. ಸೌಹಾರ್ದ ಮತ್ತು ಪ್ರೀತಿ ವಿಶ್ವಾಸದಿಂದ ಕೆಲಸ ಮಾಡಿದ್ದಾರೆ. ಆದರೆ ಇಂತಹ ಘಟನೆಗಳು ನಡೆಯಬಾರದಾಗಿತ್ತು. ಮೈತ್ರಿ ಮಾಡಿಕೊಂಡ ಸಂದರ್ಭದಲ್ಲಿ ಈ ರೀತಿ ಘಟನೆಗಳು ನಡೆದಿರುವುದು ನಿಜಕ್ಕೂ ಬೇಸರ ತಂದಿದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಬೇಕು ಎಂದು ಒತ್ತಾಯಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net