ಪ್ರೀತಂ ಕೋಟೆಯಲ್ಲಿ ಗುಟುರು.

ಪ್ರೀತಂ ಕೋಟೆಯಲ್ಲಿ ಗುಟುರು.
Published on

ಹಾಸನ: ಬಿಜೆಪಿ ಶಾಸಕ ಪ್ರೀತಂಗೌಡ ಅಧಿಪತ್ಯ ಸ್ಥಾಪಿಸಿರುವ ಹಾಸನ ವಿಧಾಸಭಾ ಕ್ಷೇತ್ರವನ್ನು ಮತ್ತೆ ತನ್ನ ವಶಕ್ಕೆ ತೆಗೆದುಕೊಳ್ಳಲು ಶತಾಯಗತಾಯ ಪ್ರಯತ್ನ ನಡೆಸಿರುವ ಜೆಡಿಎಸ್ ಮಂಗಳವಾರ ನಗರದಲ್ಲಿ ನಡೆದ ದಿವಂಗತ ಮಾಜಿ ಶಾಸಕ ಎಚ್.ಎಸ್. ಪ್ರಕಾಶ್ ಅವರು 71ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ತನ್ನ ಶಕ್ತಿ ಪ್ರದರ್ಶನ ವೇದಿಕೆಯನ್ನಾಗಿಸಿಕೊಂಡಿತು.

ಅಲ್ಲದೆ ಶಾಸಕ ಪ್ರೀತಂಗೌಡರನ್ನು ಎದುರಿಸಲು ಜೆಡಿಎಸ್ ಪಕ್ಷದಲ್ಲಿ ಸಮರ್ಥ ಎದುರಾಳಿ ಇಲ್ಲ ಎಂಬ ಟೀಕೆಗೆ ಉತ್ತರ ಎಂಬಂತೆ ಪ್ರಕಾಶ್ ಅವರ ಪುತ್ರ, ಜಿಪಂ ಮಾಜಿ ಉಪಾಧ್ಯಕ್ಷ ಸ್ವರೂಪ್ ಪ್ರಕಾಶ್ ಅವರನ್ನು ಕ್ಷೇತ್ರದ ನಾಯಕತ್ವದ ಮುಂಚೂಣಿಗೆ ತಂದು ನಿಲ್ಲಿಸುವ ಕೆಲಸವನ್ನೂ ಅಚ್ಚುಕಟ್ಟಾಗಿ ಮಾಡಿತು.

ಬೆಳಗ್ಗೆ 11ಕ್ಕೆ ಕಾರ್ಯಕ್ರಮ ನಿಗದಿಯಾಗಿದ್ದರೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ತಡವಾಗಿ ಆಗಮಿಸಿದ ಕಾರಣ ಎರಡು ಗಂಟೆಗಳಷ್ಟು ತಡವಾಗಿ ಕಾರ್ಯಕ್ರಮ ಆರಂಭವಾಯಿತು. ಸಭಾ ಕಾರ್ಯಕ್ರಮ ಆಯೋಜನೆಗೊಂಡಿದ್ದ ನಗರದ ರಿಂಗ್ ರಸ್ತೆಯ ನೂತನ ಬಡಾವಣೆಯ ವಸತಿ ನಿವೇಶದ ಜಾಗದಿಂದ ರಿಂಗ್ ರಸ್ತೆ ಮತ್ತು ಸಾಲಗಾಮೆ ರಸ್ತೆ ಉದ್ದಕ್ಕೂ ಜೆಡಿಎಸ್ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ತುಂಬಿ ತುಳುಕುತ್ತಿದ್ದರು.

ರಿಂಗ್ ರಸ್ತೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರನ್ನು ಸುಮಾರು ಒಂದು ಸಾವಿರಕ್ಕೂ ಹೆಚ್ಚಿದ್ದ ಬೈಕ್‌ಗಳ ರ‌್ಯಾಲಿ ಮೂಲಕ ಕಾರ್ಯಕ್ರಮ ಆಯೋಜಿಸಿದ್ದ ರಿಂಗ್ ರಸ್ತೆ ವೇದಿಕೆಗೆ ಕರೆ ತರಲಾಯಿತು.

ಹಾಸನಕ್ಕೆ ನನ್ನದೇ ಉಸ್ತುವಾರಿ: ಎಚ್‌ಡಿಕೆ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈ ಜಿಲ್ಲೆಯ ಜನರಲ್ಲಿ ಮೊದಲು ನಾವು ಮಾಡಿರುವ ತಪ್ಪುಗಳಿಗೆ ಕ್ಷಮೆ ಕೇಳುತ್ತೇನೆ ಎನ್ನುತ್ತಲೇ ಮಾತು ಆರಂಭಿಸಿದರು.

‘ಹಾಸನ ಜಿಲ್ಲೆಯ ರಾಜಕಾರಣದಲ್ಲಿ ಸ್ವಲ್ಪ ಗೊಂದಲಗಳಿರುವುದನ್ನು ಗಮನಿಸಿದ್ದೇನೆ, ನನ್ನ ಹೃದಯದ ಭಾವನೆಗಳ ಸಂದೇಶ ಕೊಡುವುದಕ್ಕೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ’ ಎನ್ನುತ್ತಲೇ ನೆರೆದಿದ್ದ ಕಾರ್ಯಕರ್ತರು ಜಯಘೋಷ ಮೊಳಗಿಸಿದರು.
ದೇವೇಗೌಡರಿಗೂ ಸಣ್ಣ ವಯಸ್ಸಿನಲ್ಲೇ ಈ ಜಿಲ್ಲೆಯ ಜನ ಶಕ್ತಿ ತುಂಬಿ ಪ್ರಧಾನಿ ಮಾಡಿದ್ದೀರಿ. ಈವರೆಗೆ ನಾನು ಹಾಸನ ಜಿಲ್ಲೆಯ ರಾಜಕಾರಣ ದಲ್ಲಿ ಅಷ್ಟೊಂದು ನೇರವಾಗಿ ಭಾಗಿಯಾಗಿರಲಿಲ್ಲ. ಆದರೆ ಈ ಬಾರಿ ನಾನು ಈ ಕ್ಷೇತ್ರದ ಚುನಾವಣೆಯನ್ನು ಖುದ್ದು ಹಾಜರಿದ್ದು ನಡೆಸುತ್ತೇನೆ ಎಂದು ಹೇಳುವ ಮೂಲಕ ಕಾರ್ಯಕರ್ತರಲ್ಲಿ ಹುರುಪು ತುಂಬಿದರು.

‘ನಾವು ರಾಜ ಮನೆತನದವರಲ್ಲ, ರೈತರ ಮನೆಯಲ್ಲಿ ಹುಟ್ಟಿದವರು. ಅಧಿಕಾರ ಇರಲಿ, ಇಲ್ಲದಿರಲಿ ನಾವು ಈ ನಾಡಿನ ಜನರ ಪರ ಕೆಲಸ ಮಾಡುತ್ತಾ ಬಂದಿದ್ದೇವೆ. ಪ್ರತಿಯೊಬ್ಬರಲ್ಲೂ ದೋಷಗಳಿರುತ್ತವೆ. ಅದರಂತೆ ನಮ್ಮಲ್ಲಿಯೂ ತಪ್ಪುಗಳಾಗಿವೆ. ನಮ್ಮಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನಿಮ್ಮ ಮಕ್ಕಳನ್ನು ಕ್ಷಮಿಸುವಂತೆ ನಮ್ಮನ್ನು ಕ್ಷಮಿಸಿ’ ಎಂದು ಬೇಡಿಕೊಂಡರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ, ದಿವಂಗತ ಶಾಸಕ ಎಚ್.ಎಸ್. ಪ್ರಕಾಶ್ ಪತ್ನಿ ಲಲಿತಮ್ಮ, ಪುತ್ರ ಸ್ವರೂಪ್ ಪ್ರಕಾಶ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.

ರೇವಣ್ಣ ಒರಟ:
‘ಇತ್ತೀಚೆಗೆ ಹಾಸನದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಸ್ವರೂಪ್ ಪರವಾಗಿ ಕೆಲವರು ಮಾತನಾಡಿದ್ದಾರೆ. ಆ ಘಟನೆಯನ್ನು ಇಲ್ಲಿನ ಶಾಸಕರ ಬೆಂಬಲಿಗರು ದುರುಪಯೋಗಪಡಿಸಿಕೊಂಡಿದ್ದಾರೆ. ನನ್ನ ಸಹೋದರ ರೇವಣ್ಣ ಬಗ್ಗೆ ಇಲ್ಲಿನ ಶಾಸಕ ಮಾತನಾಡಿದ್ದಾರೆ. ನನ್ನ ತಂದೆ ತುರ್ತು ಪರಿಸ್ಥಿತಿ ಸಂದರ್ಭ ಜೈಲಿಗೆ ಹೋಗಿದ್ದಾಗ ನನ್ನ ಕುಟುಂಬವನ್ನು ಸಾಕಲು ರೇವಣ್ಣ ಶಿಕ್ಷಣ ಬಿಟ್ಟು ಕೃಷಿ ಮಾಡಿದ. ರೇವಣ್ಣ ಮಾತನಾಡುವ ರೀತಿ ಸ್ವಲ್ಪ ಒರಟು. ಆದರೆ ಜಿಲ್ಲೆಯ ಪ್ರತಿ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾನೆ’ ಎಂದು ಹೇಳುವ ಮೂಲಕ ರೇವಣ್ಣ ವರ್ತನೆಯಿಂದ ಕಾರ್ಯಕರ್ತರಲ್ಲಿ ಉಂಟಾಗಿದ್ದ ಅಸಮಾಧಾನವನ್ನು ತಣಿಸುವ ಪ್ರಯತ್ನ ಮಾಡಿದರು.

‘2007 ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕನಸು ನನಸು ಮಾಡಲು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದೆ. ನಾವು ಶ್ರೀಮಂತರು ಓಡಾಡಲು ವಿಮಾನ ನಿಲ್ದಾಣ ಮಾಡಲು ಹೊರಟಿರಲಿಲ್ಲ. ಜಿಲ್ಲೆಯ ಕೃಷಿ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡಿ ಜಿಲ್ಲೆಯ ರೈತರ ಆರ್ಥಿಕ ಸ್ಥಿತಿ ಸುಧಾರಿಸಬೇಕೆಂಬುದು ದೇವೇಗೌಡರ ಕನಸಾಗಿತ್ತು. ಅದಕ್ಕಾಗ ಕಾರ್ಗೊ ವಿಮಾನ ಬರುವಂತಹ ಪೂರ್ಣ ಪ್ರಮಾಣದ ವಿಮಾನ ನಿಲ್ದಾಣ ನಿರ್ಮಿಸಲು ಮುಂದಾಗಿದ್ದೆವು. ಬಡಾವಣೆ ನಿರ್ಮಿಸಿ ದುಡ್ಡು ಮಾಡಿಕೊಳ್ಳುವುದಲ್ಲ’ ಎಂದು ಶಾಸಕ ಪ್ರೀತಂಗೌಡಗೆ ತಿರುಗೇಟು ನೀಡಿದರು.

ನೆಲಮಂಗಲದಿಂದ ಹಾಸನದವರೆಗೆ ರಸ್ತೆ, ಮೈಸೂರಿನಿಂದ ಅರಸೀಕೆರೆವರೆಗೆ ರೈಲ್ವೆ ಬ್ರಾಡ್‌ಗೇಜ್ ನಿರ್ಮಾಣ ಮಾಡಿದ್ದು ಶ್ರೀಮಂತರು ಓಡಾವುದಕ್ಕಲ್ಲ. ಅದನ್ನು ಇಲ್ಲಿನ ಶಾಸಕ ಅರ್ಥ ಮಾಡಿಕೊಳ್ಳಲಿ. ಈ ಜಿಲ್ಲೆಯ ಅಭಿವೃದ್ಧಿಗೆ ಬಿಡುಗಡೆಯಾಗಿದ್ದ ಹಣವನ್ನ ಬೇರೆಡೆಗೆ ತೆಗೆದುಕೊಂಡು ಹೋಗಿದ್ದು ಈ ಮಹಾನುಭಾವನ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಸೋಲಲು ಸಿದ್ದು ಕಾರಣ:
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ‘ಬಿ’ ಟೀಂ ಆಗಿ ಜೆಡಿಎಸ್ ಕೆಲಸ ಮಾಡುತ್ತಿದೆ ಎಂಬುದಾಗಿ ರಾಹುಲ್ ಗಾಂಧಿ ಬಾಯಲ್ಲಿ ಸಿದ್ದರಾಮಯ್ಯ ಹೇಳಿಸಿದರು. ಅದರಿಂದ ಅಲ್ಪಸಂಖ್ಯಾತರ ಮತಗಳು ಜೆಡಿಎಸ್‌ಗೆ ಬಾರದೆ ಎಚ್.ಎಸ್. ಪ್ರಕಾಶ್ ಸೋಲಲು ಕಾರಣವಾಯಿತು ಎಂದು ಸಿದ್ದರಾಮಯ್ಯನವರನ್ನು ದೂರಿದರು.

ಕೆಎಂಶಿ ವಿರುದ್ಧ ಕಿಡಿ:
ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡರ ವಿರುದ್ಧ ಕಿಡಿ ಕಾರಿದ ಎಚ್‌ಡಿಕೆ, ‘ಆ ಪುಣ್ಯಾತ್ಮ ತೆಂಗಿನ ಮರದ ಕೆಳಗೆ ಕೂತು ಹೋರಾಟ ಮಾಡಿದ್ರು, ದೇವೇಗೌಡರು ಮೋದಿ ಬಳಿ ಹೋಗಿ ಮನವಿ ಮಾಡಿದರೂ ಒಂದು ಬಿಡುಗಾಸು ಕೊಡಲಿಲ್ಲ. ಸಿದ್ದರಾಮಯ್ಯ ಅಧಿಕಾರವಧಿಯಲ್ಲಿಯೂ ಅನುದಾನ ಸಿಗಲಿಲ್ಲ. ನಾನು ಸಿಎಂ ಆದಾಗ ತೆಂಗಿನ ಮರಗಳಿಗೆ 165 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿದೆ. ಆದರೆ ಇವತ್ತು ಆ ಮಹಾನುಭವ ಬೇರೆ ಯಾರದೋ ಹೆಸರು ಹೇಳುತ್ತಿದ್ದಾನೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೇವಣ್ಣ ಕುಟುಂಬ ಗೈರು:
ಸ್ವರೂಪ್ ಅಭಿಮಾನಿಗಳ ನಿರೀಕ್ಷೆಯಂತೆ ದಿವಂಗತ ಶಾಸಕ ಎಚ್.ಎಸ್. ಪ್ರಕಾಶ್ ಅವರು ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಮೂವರು ಜನಪ್ರತಿನಿಧಿಗಳಿರುವ ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ ಕುಟುಂಬ ಗೈರು ಎದ್ದು ಕಾಣುತ್ತಿತ್ತು. ಪೂರ್ವ ನಿಗದಿಯ ಕಾರ್ಯಕ್ರಮದ ಪ್ರಯುಕ್ತ ಶಾಸಕ ಎಚ್.ಡಿ. ರೇವಣ್ಣ ಅವರು ಹಿರಿಯ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ಅವರೊಂದಿಗೆ ದೆಹಲಿಯಲ್ಲಿ ನಡೆಯುತ್ತಿರುವ ವಿಶ್ವ ಹಾಲು ಒಕ್ಕೂಟದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೆ, ಕಿರಿಯ ಪುತ್ರ, ಸಂಸದ ಪ್ರಜ್ವಲ್ ರೇವಣ್ಣ ವಿದೇಶ ಪ್ರವಾಸದಲಿದ್ದಾರೆಂದು ಹೇಳಲಾಗಿದೆ.

ದೇವೇಗೌಡರ ಕುಟುಂಬಕ್ಕೆ ಋಣಿ:‘‘ನನ್ನ ತಂದೆ ಎಚ್.ಎಸ್. ಪ್ರಕಾಶ್ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಸನ ಕ್ಷೇತ್ರದಿಂದ 6 ಬಾರಿ ಟಿಕೆಟ್ ನೀಡಿದ್ದರು. ಅವರ ಕುಟುಂಬಕ್ಕೆ ನಮ್ಮ ಕುಟುಂಬ ಎಂದಿಗೂ ಋಣಿಯಾಗಿರುತ್ತದೆ. ಸಂಜೀವಿನಿ ಸಹಕಾರಿ ಆಸ್ಪತ್ರೆ ದೇವೇಗೌಡರ ಕೊಡುಗೆ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಸಂಜೀವಿನಿ ನರ್ಸಿಂಗ್ ಕಾಲೇಜು ತೆರೆಯಲು ಸಹಕಾರ ನೀಡಿದರು. ನಮ್ಮ ತಂದೆಯ ಮೇಲಿನ ಪ್ರೀತಿಯಿಂದ ಕಾರ್ಯಕರ್ತರು ಮಾತನಾಡಿದ್ದಾರೆ. ಅದರಲ್ಲಿ ತಪ್ಪು ಹುಡುಕುವುದು ಬೇಡ. ಹಾಸನ ವಿಧಾನಸಭಾ ಕ್ಷೇತ್ರದಿಂದ ಯಾರಿಗೇ ಟಿಕೆಟ್ ನೀಡಿದರು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ’’

  • ಸ್ವರೂಪ್ ಪ್ರಕಾಶ್, ಜಿಪಂ ಮಾಜಿ ಉಪಾಧ್ಯಕ್ಷ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net