ಪ್ರೀತಿ, ಸಹೋದರತೆಯಿಂದ ಜನ್ಮ ಸಾರ್ಥಕ

22 lxr 2.b
Published on

ಲಕ್ಷ್ಮೇಶ್ವರ: ಪ್ರತಿಯೊಬ್ಬರೂ ಮಾನವೀಯತೆ, ಕರುಣೆ, ಪ್ರೀತಿ, ಸಹೋದರತ್ವದಿಂದ ಬದುಕಿದಾಗ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದು ಪದ್ಮಶ್ರೀ ಪುರಸ್ಕೃತ, ಸಂತ ಇಬ್ರಾಹಿಂ ಸುತಾರ ಹೇಳಿದರು.

ಶಿವರಾತ್ರಿ ಅಂಗವಾಗಿ ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಪುಲಿಗೆರೆ ಅನ್ನದಾಸೋಹ ಬಳಗದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಭಾವೈಕ್ಯ ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ದುಡಿಮೆ ಫಲದಲ್ಲಿ ಒಂದಿಷ್ಟು ದಾನ, ಧರ್ಮ, ಸಾಮಾಜಿಕ ಕಾರ್ಯಗಳಿಗೆ ನೀಡಬೇಕು. ಪಾಲಕರು ಮಕ್ಕಳಿಗೆ ಅಂಕ ಗಳಿಕೆಗೆ ಒತ್ತಡ ಹೇರಿ ಡಾಕ್ಟರ್, ಇಂಜಿನಿಯರ್ ಮಾಡುವ ಕನಸು ಕಾಣದೇ ಎಲ್ಲರೂ ಮೆಚ್ಚುವ ಮಾನವನಾಗುವಂತೆ ಬೆಳೆಸಬೇಕು. ದುಡಿಮೆಯ ಫಲ ಶ್ರೇಷ್ಠ. ಮತ್ತೊಬ್ಬರನ್ನು ನೋಯಿಸಿ, ಅನ್ಯಾಯದಿಂದ ಸಂಪಾದಿಸಿದ್ದರೆ ಅದರಿಂದ ಒಳ್ಳೆಯದಾಗುವುದಿಲ್ಲ. ಈಶ್ವರ/ಅಲ್ಲಾ ಬೇರೆಯಲ್ಲ. ದೇವರ ಅನುಗ್ರಹಕ್ಕಾಗಿ ಕಾಯಕ ನಿಷ್ಠೆ, ಧರ್ಮ ಪಾಲನೆ ಅವಶ್ಯ ಎಂದರು.

ಗೆಳೆಯರ ಬಳಗದ ಶಂಕ್ರಣ್ಣ ಬಾಳಿಕಾಯಿ, ಬಸವರಾಜ ಮೆಣಸಿನಕಾಯಿ, ಅರ್ಚಕ ಸಮೀರ ಪೂಜಾರ, ಚಿರಂಜೀವಿ ಕನವಳ್ಳಿ, ಆನಂದ ಪುಟಾಣಿ, ಪ್ರವೀಣ ಗೌರಿ, ರಜನೀಶ ರೋಣದ, ವಿಶ್ವ ಬಳಿಗಾರ, ನವೀನ ಮೆಣಸಿನಕಾಯಿ, ಶ್ರೀಧರ ನವಲಗುಂದ, ಬಸವರಾಜ ಕುಂಬಾರ, ನಾಗರಾಜ ಶೇಟ್, ಚೇತನ ಪಾಟೀಲ, ಇತರರು ಉಪಸ್ಥಿತರಿದ್ದರು.

ಅಹೋರಾತ್ರಿ ದೇವಸ್ಥಾನದ ಪ್ರಾಂಗಣದಲ್ಲಿ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪಟ್ಟಣದ ಶಾರದಾ ಸಂಗೀತ ಗುರುಕುಲ ವಿದ್ಯಾಪೀಠದ ಶಾಸ್ತ್ರೀಯ ಮತ್ತು ಸುಗಮ ಸಂಗೀತ ಕಾರ್ಯಕ್ರಮ, ದಾವಣಗೆರೆಯ ಶಾರದಾ ಸಂಗೀತ ಮತ್ತು ನೃತ್ಯಕಲಾ ಶಾಲೆ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಹುಬ್ಬಳ್ಳಿ, ಲಕ್ಷ್ಮೇಶ್ವರದ ಕಲಾ ಸುಜಯ ಭರತನಾಟ್ಯ ಶಾಲೆಯ ವಿ. ಸುಜಯ ಶಾನಭಾಗ ಅವರ ಭರತನಾಟ್ಯ, ಇಂದುಮತಿ ಸಾಲಿಮಠ ತಂಡದಿಂದ ನಗೆ ಜಾಗರಣೆ, ಮಲ್ಲಪ್ಪ ಹೊಂಗಲ ಅವರಿಂದ ಮೊಬೈಲ್ ಮಲ್ಲ, ಶ್ವೇತಾ ಜಗದೀಶ ಅವರಿಂದ ಹಾಸ್ಯ ಕಾರ್ಯಕ್ರಮ ಜರುಗಿದವು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net