ಪ್ರಿಯಾಂಕ್ ಖರ್ಗೆ ಸಂಪುಟದಿಂದ ಕೈಬಿಡಿ

Chalavadi
Published on

ಚಿತ್ರದುರ್ಗ: ಸರ್ವಾಧಿಕಾರಿ ಧೋರಣೆ ಮೈಗೂಡಿಸಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಛಲವಾದಿ ಸ್ವಾಭಿಮಾನಿ ಸೇನೆಯ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಸಚಿವರ ವಿರುದ್ಧ ಧಿಕ್ಕಾರ ಕೂಗಿದರು. ನೈತಿಕ ಹೊಣೆ ಹೊತ್ತು ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸೇರಿ ಬೆಂಬಲಿಗರನ್ನು ಚಿತ್ತಾಪುರ ಪಟ್ಟಣದಲ್ಲಿ 5 ಗಂಟೆ ಕೂಡಿ (ದಿಗ್ಭಂದನ) ಹಾಕಿರುವ ಘಟನೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ದೌರ್ಜನ್ಯ, ದಬ್ಬಾಳಿಕೆ ಜಾಸ್ತಿಯಾಗುತ್ತಿದೆ. ಸಚಿವರ ಚೇಲಾಗಳು ನಾರಾಯಣಸ್ವಾಮಿ ಅವರನ್ನು ಕೂಡಿ ಹಾಕಿರುವುದು ಮಾತ್ರವಲ್ಲ. ಕಾರಿಗೆ ಮಸಿ ಬಳಿದಿದ್ದು, ಇಂತಹ ಅಮಾನವೀಯ ಘಟನೆ ನಡೆದಿದ್ದರೂ ಸಿಎಂ, ಡಿಸಿಎಂ ಮೌನ ವಹಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ನ ಕೆಲ ಗೂಂಡಾಗಳು ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವ ನಾರಾಯಣಸ್ವಾಮಿ ಅವರಿಗೆ ಈ ರೀತಿಯಾದರೆ, ಇನ್ನೂ ಜನಸಾಮಾನ್ಯರ ಗತಿ ಏನು ಎಂದು ಕಿಡಿಕಾರಿದರು.

ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಛಲವಾದಿ ತಿಪ್ಪೇಸ್ವಾಮಿ ಸೇರಿ ಐವರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು.

ಪದಾಧಿಕಾರಿಗಳಾದ ಛಲವಾದಿ ತಿಪ್ಪೇಸ್ವಾಮಿ, ಎಂ.ಕೆ.ನಟರಾಜ್, ಜಗದೀಶ್, ಮಲ್ಲೇಶ್, ಪ್ರದೀಪ್, ಆನಂದ್ ಪೈಲೆಟ್, ಶ್ರೀನಿವಾಸ್, ಅರುಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net