

ಚಿಕ್ಕಮಗಳೂರು: ಶಾಸಕ ಪ್ರಿಯಾಂಕ್ ಖರ್ಗೆ ಸರ್ಕಾರವನ್ನು ಟೀಕಿಸುವ ಭರದಲ್ಲಿ ಮಹಿಳೆಯರಿಗೆ ಅಪಮಾನ ಮಾಡಿದ್ದು ಅವರ ವಿರುದ್ದ ದೂರು ದಾಖಲಿಸಿಕೊಳ್ಳುವಂತೆ ಒತ್ತಾಯಿಸಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹಾಗೂ ಎಸ್ಪಿ ಉಮಾ ಪ್ರಶಾಂತ್ ಅವರಿಗೆ ಮನವಿ ಸಲ್ಲಿಸಿದರು.
ಲಂಚ ಮತ್ತು ಮಂಚದ ಸರ್ಕಾರ ಎಂದು ಕರೆದಿರುವುದು ಸ್ತ್ರೀ ಸಮೂಹಕ್ಕೆ ಮಾಡಿರುವ ಅಪಮಾನ. ಅವರ ತಂದೆ ಐದು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಅವರೂ ಸಹ ಎರಡು ಬಾರಿ ಶಾಸಕರಾಗಿ ಜವಾಬ್ದಾರಿ ನಿರ್ವಹಿಸಿದ್ದರೂ ಸಂಸ್ಕಾರ ಕಲಿಯದಿರುವುದು ಹೊಣೆಗೇಡಿತನಕ್ಕೆ ಸಾಕ್ಷಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಾಜದ ಉನ್ನತ ಸ್ಥಾನದಲ್ಲಿರುವವರೇ ಸಂವಿಧಾನಕ್ಕೆ ಅಪಚಾರವಾಗುವ ರೀತಿ ನಡೆದುಕೊಳ್ಳುತ್ತಿರುವುದು ಆತಂಕದ ಸಂಗತಿ. ಜವಾಬ್ದಾರಿಯುತ ಜನಪ್ರತಿನಿಧಿಗಳೇ ಈ ರೀತಿ ಹೇಳಿಕೆ ನೀಡಿದರೆ ಇನ್ನು ಸಾಮಾನ್ಯರ ಗತಿಯೇನು? ಹಾಗಾಗಿ ಉದ್ದೇಶಪೂರ್ವಕವಾಗಿ ಹೇಳಿಕೆ ನೀಡಿ ಸ್ತ್ರೀಕುಲಕ್ಕೆ ಅಪಮಾನ ಮಾಡಿರುವ ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.