ಪ್ರಿಯಾಂಕ ಖರ್ಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ: ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

SGR WEB BJP
Published on

ಸಾಗರ: ಸರ್ಕಾರವನ್ನು ಟೀಕಿಸುವ ಭರಾಟೆಯಲ್ಲಿ ಮಹಿಳೆಯರ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿರುವ ಚಿತ್ತಾಪುರ ಶಾಸಕ ಪ್ರಿಯಾಂಕ ಖರ್ಗೆ ಹೇಳಿಕೆ ಖಂಡನೀಯ. ಖರ್ಗೆ ಕೂಡಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿ ಗುರುವಾರ ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದರು.

ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಮಾತನಾಡಿ, ಶಾಸಕ ಪ್ರಿಯಾಂಕ ಖರ್ಗೆ ಮಹಿಳೆಯರಿಗೆ ಉದ್ಯೋಗ ಸಿಗಬೇಕಾದರೆ ಮಂಚ ಹತ್ತಬೇಕು, ಪುರುಷರಿಗೆ ಉದ್ಯೋಗ ಬೇಕೆಂದರೆ ಲಂಚ ಕೊಡಬೇಕು ಎಂದು ನೀಡಿರುವ ಹೇಳಿಕೆ ಅವರ ಬೌದ್ಧಿಕ ದಿವಾಳಿತನ ಎತ್ತಿ ತೋರಿಸುತ್ತಿದೆ. ಬಹುಶಃ ತಮ್ಮ ಸರ್ಕಾರದ ಅವಧಿಯಲ್ಲಿ ಇಂತಹ ಕೆಲಸ ನಡೆಯುತ್ತಿರುವುದನ್ನು ಶಾಸಕ ಪ್ರಿಯಾಂಕ ಖರ್ಗೆ ಈ ಮೂಲಕ ಒಪ್ಪಿಕೊಂಡಂತೆ ಕಾಣುತ್ತಿದೆ. ತಕ್ಷಣ ಶಾಸಕರು ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದು ಮಹಿಳೆಯರ ಕ್ಷಮೆ ಕೋರಬೇಕು. ಇದರ ಜತೆಗೆ ಸಾಗರ ಕ್ಷೇತ್ರದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಶಾಸಕರಾದ ಹರತಾಳು ಹಾಲಪ್ಪ ರಿಪ್ಪನಪೇಟೆಯಲ್ಲಿ ಅಕ್ಕಪಕ್ಕ ಮಹಿಳೆಯರನ್ನು ಇರಿಸಿಕೊಂಡು ಧ್ವಜ ಹಿಡಿದುಕೊಂಡು ನಿಂತಿದ್ದಾರೆ ಎಂದು ನೀಡಿರುವ ಹೇಳಿಕೆಯನ್ನೂ ಬಿಜೆಪಿ ಮಹಿಳಾ ಮೋರ್ಚಾ ಖಂಡಿಸುತ್ತಿದೆ. ರಾಜಕಾರಣಿಗಳು ಸಾರ್ವಜನಿಕ ಕ್ಷೇತ್ರದಲ್ಲಿ ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು ಎಂದರು.

ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಸವಿತಾ ವಾಸು ಮಾತನಾಡಿ, ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಪ್ರಿಯಾಂಕ ಖರ್ಗೆ ಅವರ ಹೇಳಿಕೆಯನ್ನು ಸಮಸ್ತ ನಾರಿಕುಲ ಖಂಡಿಸುತ್ತದೆ. ತಕ್ಷಣ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಮಹಿಳೆಯರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net