

ಚಾಮರಾಜನಗರ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನು ಕೊಲೆಗೈದು, ಕಾಣೆಯಾಗಿರುವುದಾಗಿ ದೂರು ನೀಡಿದ್ದ ಆರೋಪದಡಿ ಪತ್ನಿ ಮತ್ತು ಈಕೆಯ ಪ್ರಿಯಕರನ್ನು ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಜನ್ನೂರು ಗ್ರಾಮದ ನಿವಾಸಿ ರಮೇಶ್‌ನನ್ನು(45) ಕೊಲೆ ಮಾಡಿದ ಆರೋಪದಡಿ ಪತ್ನಿ ಗೀತಾ(38), ಈಕೆಯ ಪ್ರಿಯಕರ ಗುರುಪಾದಸ್ವಾಮಿ(40) ಬಂಧಿತರು. ಕುದೇರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ನಾಪತ್ತೆ ದೂರು ಪ್ರಕರಣವನ್ನು ಎಸ್ಪಿ ಡಾ.ಬಿ.ಟಿ.ಕವಿತಾ, ಡಿವೈಎಸ್ಪಿ ಲಕ್ಷ್ಮಯ್ಯ, ಸರ್ಕಲ್ ಇನ್ಸ್‌ಪೆಕ್ಟರ್ ಬಸವರಾಜು ಮಾರ್ಗದರ್ಶನದಲ್ಲಿ ವಿಚಾರಣೆ ನಡೆಸಿದ ಸಬ್ ಇನ್ಸ್‌ಪೆಕ್ಟರ್ ಕುಮುದಾ ಮತ್ತು ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ನದಿಗೆ ಎಸೆದು ನಾಪತ್ತೆ ದೂರು ಕೊಟ್ಟಿದ್ದಳು: ಗೀತಾ ಮತ್ತು ರಮೇಶ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಗೀತಾ ಮತ್ತು ಗುರುಪಾದಸ್ವಾಮಿ ನಡುವೆ ಅಕ್ರಮ ಸಂಬಂಧವಿತ್ತು. ಈ ವಿಷಯ ಗೊತ್ತಾಗಿ ಪತಿ ರಮೇಶ್ ಪ್ರಶ್ನಿಸಿ ಗಲಾಟೆ ತೆಗೆದಿದ್ದ. ಈ ಕಾರಣಕ್ಕೆ ಪ್ರಿಯಕರನೊಂದಿಗೆ ಸೇರಿ ಪತ್ನಿ ಗೀತಾ ತನ್ನ ಪತಿಯನ್ನು ರಮೇಶ್‌ನನ್ನು ಕೊಲೆ ಮಾಡಿ ಕುಪ್ಪೇಗಾಲದ ಕಪಿಲಾ ನದಿಗೆ ಎಸೆದುಬಂದಿದ್ದರು. ಸಿಕ್ಕಿಬೀಳಬಾರದೆಂದು ಜ.21ರಂದು ಕುದೇರು ಪೊಲೀಸ್ ಠಾಣೆಯಲ್ಲಿ ಪತಿ ನಾಪತ್ತೆಯಾಗಿರುವುದಾಗಿ ಪತ್ನಿ ಗೀತಾ ದೂರು ನೀಡಿದ್ದಳು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಗೀತಾ ಮತ್ತು ಗುರುಪಾದಸ್ವಾಮಿಗೆ ಅಕ್ರಮ ಸಂಬಂಧವಿರುವುದು ಗೊತ್ತಾಗಿದೆ. ಇವರನ್ನು ವಿಚಾರಣೆಗೆ ಒಳಪಡಿಸಿದಾಗ ಪತಿಯನ್ನು ಕೊಲೆ ಮಾಡಿ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನದಿಯ ಬಳಿ ಇದ್ದ ರಮೇಶ್ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಎಸ್ಪಿ ಭೇಟಿ: ಜನ್ನೂರು ಗ್ರಾಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಭೇಟಿ ನೀ ವಿಚಾರಿಸಿದರು. ನಂತರ ಕುಪ್ಪೇಗಾಲದ ಬ್ರಿಡ್ಜ್ ಬಳಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ತನಿಖಾಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದರು. ಡಿವೈಎಸ್ಪಿ ಲಕ್ಷ್ಮಯ್ಯ ಇದ್ದರು.