ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆ

Crime Logo
Published on

ಮುಳಗುಂದ: ಅನೈತಿಕ ಸಂಬಂಧ ಹೊಂದಿದ್ದ ಪತ್ನಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆಗೈದ ಘಟನೆ ಸಮೀಪದ ಕಬಲಾಯತಕಟ್ಟಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ಲಕ್ಷ್ಮಣ ಪಾಂಡಪ್ಪ ಲಮಾಣಿ (39) ಕೊಲೆಯಾದವ. ಈತನ ಪತ್ನಿ ಲಲಿತಾ ಲಮಾಣಿ (35) ಮತ್ತು ಅತ್ತಿಕಟ್ಟಿ ತಾಂಡಾದ ಸೋಮಪ್ಪ ಚ. ಲಮಾಣಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಷಯ ಲಕ್ಷ್ಮಣನಿಗೆ ಗೊತ್ತಾಗಿ ಬೈದದ್ದರಿಂದ ಪತ್ನಿ ಲಲಿತಾ ಹಾಗೂ ಸೋಮಪ್ಪ ಸೇರಿಕೊಂಡು ಅ. 1ರಂದು ಬೆಳಗಿನ ಜಾವ ಲಕ್ಷ್ಮಣನನ್ನು ಹಗ್ಗದಿಂದ ಉರುಳು ಬಿಗಿದು ಕೊಲೆ ಮಾಡಿದ್ದಾರೆ ಎಂದು ಗೊತ್ತಾಗಿದೆ. ಲಕ್ಷ್ಮಣನ ಸಹೋದರ ರಮೇಶ ಲಮಾಣಿ ನೀಡಿದ ದೂರಿನನ್ವಯ ಮುಳಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬೊಲೆರೊ ಮೇಲಿಂದ ಬಿದ್ದು ಇಬ್ಬರ ಸಾವು

ಲಕ್ಷ್ಮೇಶ್ವರ: ಕೃಷಿ ಕೆಲಸ ಮುಗಿಸಿ ಬೊಲೆರೊ ವಾಹನದ ಟಾಪ್ ಮೇಲೆ ಕುಳಿತು ಪ್ರಯಾಣಿಸುತ್ತಿದ್ದ ಇಬ್ಬರು ಬಿದ್ದು ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ಸಂಭವಿಸಿದೆ

ಸುವರ್ಣಗಿರಿ ತಾಂಡಾದ ಗಂಗಪ್ಪ ಲಚ್ಚಪ್ಪ ಲಮಾಣಿ (35) ಮತ್ತು ರಮೇಶ ಪುಸಿಂಗಪ್ಪ ಲಮಾಣಿ (30) ಸಾವನ್ನಪ್ಪಿದವರು.

ಕೃಷಿ ಕೂಲಿ ಕೆಲಸಕ್ಕೆಂದು ಸುವರ್ಣಗಿರಿ ತಾಂಡಾದ ಇವರಿಬ್ಬರು ಹುಲಗೂರು ಗ್ರಾಮಕ್ಕೆ ತೆರಳಿದ್ದರು. ಗುರುವಾರ ಸಂಜೆ ಕೆಲಸ ಮುಗಿಸಿ ಬೊಲೆರೋ ವಾಹನದ ಮೇಲೆ ಕುಳಿತು ವಾಪಸ್ ಬರುವಾಗ ದೊಡ್ಡೂರು-ಯಲ್ಲಾಪೂರ ರಸ್ತೆಯಲ್ಲಿ ಚಾಲಕ ವಾಹನದ ವೇಗ ಹೆಚ್ಚಿಸಿದ್ದಾನೆ. ಆಗ ರಸ್ತೆಗೆ ಅಡ್ಡಲಾಗಿ ಹಾಯ್ದು ಹೋದ ವಿದ್ಯುತ್ ತಂತಿ ಇವರಿಗೆ ಬಡಿದಿದೆ. ಆಗ ಇಬ್ಬರು ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಡಲೆ ಅವರಿಬ್ಬರನ್ನು ಲಕ್ಷೆ್ಮೕಶ್ವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಗಂಗಪ್ಪ ಸಾವನ್ನಪ್ಪಿದ್ದಾನೆ. ಹೆಚ್ಚಿನ ಚಿಕಿತ್ಸೆಗೆಂದು ರಮೇಶ ಲಮಾಣಿಯನ್ನು ಕಿಮ್ಸ್​ಗೆ ದಾಖಲಿಸಲಾಗಿತ್ತು ಅವರೂ ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ಮೃತಪಟ್ಟಿದ್ದಾರೆ. ಈ ಕುರಿತಂತೆ ಈಶಪ್ಪ ಲಚ್ಚಪ್ಪ ಲಮಾಣಿ ಎನ್ನುವವರು ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ಬಸ್ ಹಿಂದಿನ ಚಕ್ರಕ್ಕೆ ಸಿಲುಕಿ ಸಾವು

ಗದಗ: ಸಾರಿಗೆ ಬಸ್ ಓವರ್​ಟೇಕ್ ಮಾಡುವ ಸಂದರ್ಭದಲ್ಲಿ ಆಯತಪ್ಪಿ ಬಿದ್ದು ಬಸ್​ನ ಹಿಂದಿನ ಚಕ್ರಕ್ಕೆ ಸಿಲುಕಿ ಯುವಕನೊಬ್ಬ ಮೃತಪಟ್ಟ ಘಟನೆ ಶುಕ್ರವಾರ ನಗರದ ಮುಳಗುಂದ ನಾಕಾದ ಬಳಿ ಸಂಭವಿಸಿದೆ. ತಾಲೂಕಿನ ನಾಗಾವಿ ಗ್ರಾಮದ ಉಡಚಪ್ಪ ಪೂಜಾರ (25) ಮೃತಪಟ್ಟವ. ಸ್ಥಳಕ್ಕೆ ಸಂಚಾರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು. ಗದಗ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net