ಪ್ರಿಯಕರ ಕೈಕೊಟ್ಟಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

Published on

ಮೈಸೂರು: ಪ್ರೀತಿಸಿದ ಯುವಕ ವಂಚಿಸಿದ್ದರಿಂದ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿ ಇತ್ತೀಚೆಗೆ ಮೃತಪಟ್ಟಿದ್ದಾಳೆ.
ತಾಲೂಕಿನ ಗೌಡನಹಳ್ಳಿ ಗ್ರಾಮದ ಜಿ.ಎಸ್. ಮಹದೇವ ಅವರ ಪುತ್ರಿ ನಿಸರ್ಗ(20) ಮೃತಳು. ತನ್ನ ಸಾವಿಗೆ ಪ್ರಿಯಕರ ಸುಹಾಸ್ ರೆಡ್ಡಿ, ಆತನ ತಂದೆ ಗೋಪಾಲಕೃಷ್ಣ, ಪೋಷಕರಾದ ಬಾಬುರೆಡ್ಡಿ, ರೂಪಾ, ಸುಹಾಸ್ ರೆಡ್ಡಿಯ ಮತ್ತೊಬ್ಬ ಸ್ನೇಹಿತೆ ಅನನ್ಯಾ ಕಾರಣ ಎಂದು ಡೆತ್‌ನೋಟ್ ಬರೆದಿದ್ದು, ಈ ಬಗ್ಗೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಟ್ಟಣದ ಪದವಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ ನಿಸರ್ಗ, ನಾಲ್ಕು ವರ್ಷಗಳಿಂದ ಸುಹಾಸ್ ರೆಡ್ಡಿಯನ್ನು ಪ್ರಿತಿಸುತ್ತಿದ್ದು, ಇತ್ತೀಚೆಗೆ ಅನನ್ಯಾ ಎಂಬ ಯುವತಿಯೊಂದಿಗೆ ಓಡಾಡುತ್ತಿದ್ದ. ಇದರಿಂದ ತನ್ನನ್ನು ಕಡೆಗಣಿಸಲಾಗುತ್ತಿದೆ ಎಂದು ನಿಸರ್ಗ ಸುಹಾಸ್ ರೆಡ್ಡಿ ಪಾಲಕರ ಗಮನಕ್ಕೆ ತಂದಾಗ ಅವರು ಹೀಯಾಳಿಸಿದ್ದರು ಎನ್ನಲಾಗಿದೆ.
ಇದರಿಂದ ಮನನೊಂದಿದ್ದ ನಿಸರ್ಗ, ಬ್ಲೇಡ್‌ನಿಂದ ಕೈ ಕೊಯ್ದುಕೊಂಡು ತನಗಾದ ವಂಚನೆಯನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾಳೆ. ಅಲ್ಲದೆ, ಜುಲೈ 9 ರಂದು ಡೆತ್‌ನೋಟ್ ಬರೆದು ಇಲಿ ಪಾಷಣ ಸೇವಿಸಿದ್ದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಯುವತಿಯನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೃತಳ ಪಾಲಕರು ನೀಡಿದ ದೂರಿನ ಮೇರೆಗೆ ಐವರ ವಿರುದ್ಧ್ದ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net