

ಮೈಸೂರು: ನಗರದ ದಾಸಪ್ಪ ವೃತ್ತದಿಂದ ಶ್ರೀವೆಂಕಟರಮಣ ದೇವಸ್ಥಾನದ ವೃತ್ತದ ವರೆಗೆ ಇರುವ ಪ್ರಿನ್ಸೆಸ್ ರಸ್ತೆಯ ಹೆಸರು ಬದಲಿಸುತ್ತಿಲ್ಲ. ಬದಲಿಗೆ ಅಲ್ಲಿಂದ ಮೇಟಗಳ್ಳಿಯ ರಾಯಲ್ ಇನ್ ಹೋಟೆಲ್ ವೃತ್ತದವರೆಗಿನ ರಸ್ತೆಗೆ ಮಾತ್ರ ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಎಂದು ನಾಮಕರಣ ಮಾಡಲಾಗುತ್ತಿದೆ ಎಂದು ಶಾಸಕ ಕೆ.ಹರೀಶ್‌ಗೌಡ ಹೇಳಿದರು.
ಶ್ರೀವೆಂಕಟರಮಣ ದೇವಸ್ಥಾನದ ವೃತ್ತದಿಂದ ಮೇಟಗಳ್ಳಿ ರಾಯಲ್ ಇನ್ ಹೋಟೆಲ್ ವೃತ್ತದವರೆಗಿನ ರಸ್ತೆಗೆ ಯಾವುದೇ ಹೆಸರು ಇಟ್ಟಿಲ್ಲ. ಲೋಕಾರೂಢಿಯಲ್ಲಿ ಕೆ.ಆರ್.ಎಸ್. ರಸ್ತೆ ಎಂದು ಜನರು ಕರೆಯುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಡುಗೆ, ಸಾಧನೆಗಾಗಿ ಅವರ ಹೆಸರು ಇಡಲು ಪಾಲಿಕೆ ಆಡಳಿತಾಧಿಕಾರಿ ಜಿಲ್ಲಾಧಿಕಾರಿಗೆ ನ.12 ರಂದು ಮನವಿ ಸಲ್ಲಿಸಿದರು. ಅಂತೆಯೇ ಕೌನ್ಸಿಲ್ ಸಭೆಯಲ್ಲಿ ಕರೆದು ನಿರ್ಣಯ ತೆಗೆದುಕೊಂಡು ಸಾರ್ವಜನಿಕರ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಹೀಗಾಗಿ, ಇದಕ್ಕೆ ವಿರೋಧ ಸಲ್ಲದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಕುರಿತು ರಾಜವಂಶಸ್ಥ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಬಿಜೆಪಿ ಮುಖಂಡರೊಂದಿಗೆ ಅವರು ಕರೆದ ಕಡೆಗೆ ದಾಖಲೆ ಸಹಿತ ಹೋಗಿ ವಿಷಯವನ್ನು ಮನವರಿಕೆ ಮಾಡಿಕೊಡಲು ಸಿದ್ಧ. ಯದುವಂಶದ ಕುರಿತು ಗೌರವ, ಅಭಿಮಾನ ಇದೆ. ಹೀಗಾಗಿ, ಪ್ರಿನ್ಸೆಸ್ ರಸ್ತೆ ಹೆಸರು ತೆಗೆದುಹಾಕುವ ಕೆಟ್ಟ ಆಲೋಚನೆಯೂ ಇಲ್ಲ.
ಆ ಕೆಲಸವನ್ನು ಮಾಡಲು ಯಾರೇ ಮುಂದಾದರೂ ಅದಕ್ಕೆ ನಾನು ಮೊದಲು ವಿರೋಧಿಸುವೆ. ಆದರೆ, ತಪ್ಪು ಮಾಹಿತಿಯಿಂದ ದಾರಿ ತಪ್ಪಿಸುವ ಕೆಲಸವಾಗುತ್ತಿದೆ. ಇದನ್ನು ರಾಜಕೀಯ ದುರುದ್ದೇಶಕ್ಕೂ ಬಳಕೆ ಮಾಡಿಕೊಳ್ಳಲಾಗುತ್ತಿದೆ, ಇದು ಆಗಬಾರದು ಎಂದರು.
ಕಾಂಗ್ರೆಸ್ ಕಚೇರಿ ಬಳಿಯ ದಾಸಪ್ಪ ವೃತ್ತದಿಂದ ಶ್ರೀವೆಂಕಟರಮಣ ದೇವಸ್ಥಾನದವರೆಗೆ ರಸ್ತೆಗೆ ಪ್ರಿನ್ಸೆಸ್ ರಸ್ತೆ ಎಂದು ಹೆಸರಿರುವುದಕ್ಕೆ ದಾಖಲೆ ಇದೆ. 1930ರಲ್ಲೇ ಈ ಹೆಸರಿಡಲಾಗಿದೆ. ಆದರೆ, ಅಲ್ಲಿಂದ ಮೇಟಗಳ್ಳಿಯ ರಾಯಲ್ ಇನ್ ಹೋಟೆಲ್ ವೃತ್ತದವರೆಗಿನ ರಸ್ತೆಗೆ ನಾಮಕರಣ ಮಾಡಿಲ್ಲ ಎಂಬುದಕ್ಕೂ ದಾಖಲೆಗಳಿವೆ. 1997, 2016ರ ಮುಡಾ ನಕ್ಷೆಯಲ್ಲೂ ಇದು ಉಲ್ಲೇಖವಾಗಿದೆ. ಈ ಕುರಿತು ಚರ್ಚೆಗೆ ಸಿದ್ಧ ಎಂದರು.
ಹಾಲಿ ಇರುವ ಹೆಸರನ್ನು ತೆಗೆದುಹಾಕಲು ಯಾರೂ ಹೇಳುತ್ತಿಲ್ಲ. ಹೀಗಾಗಿ, ಈ ವಿವಾದ ಇಲ್ಲಿಗೆ ಅಂತ್ಯ ಆಗಲಿ. ಯಾವುದೇ ಹೆಸರಿಲ್ಲದ ರಸ್ತೆಗೆ ಹೆಸರು ಇಡಲಾಗುತ್ತಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿದಿಲ್ಲ. ಇತ್ತೀಚಿಗಷ್ಟೇ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತುಕತೆ ನಡೆಸಿ ವಿಷಯ ತಿಳಿಸಿರುವೆ ಎಂದರು.
‘ದಾಸಪ್ಪ ವೃತ್ತದಿಂದ ಮೇಟಗಳ್ಳಿ ರಾಯಲ್ ಇನ್ ಹೋಟೆಲ್‌ವರೆಗೂ ಪಿನ್ಸೆಸ್ ರಸ್ತೆ ಹೆಸರಿದೆ’ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯೆ ಅವರು, ನಾನು ಬಿಡುಗಡೆ ಮಾಡಿರುವುದು ಅಧಿಕೃತ ದಾಖಲೆಗಳು. ಮುಡಾದ ಸಂಬಂಧಪಟ್ಟ ಅಧಿಕಾರಿಗಳ ಸಹಿ, ಸೀಲು ಇದೆ. ಇದನ್ನು ಯಾರು ಬೇಕಾದರೂ ಪರಿಶೀಲನೆ ಮಾಡಬಹುದು. ಈ ಕುರಿತು ದಾಖಲೆ ಸಹಿತ ಸಾಬೀತುಪಡಿಸಿ, ಅದು ರುಜುವಾತಾದರೆ ಹಿಂದೆ ಸರಿಯಲಾಗುವುದು ಎಂದು ಸವಾಲು ಹಾಕಿದರು.
ಪ್ರಿನ್ಸೆಸ್ ರಸ್ತೆಯಲ್ಲಿ ಮಹಾರಾಣಿ ಕೆಂಪನಂಜಮ್ಮಣ್ಣಿ ಹೆಸರಿನ ನಾಮಫಲಕ ಇಲ್ಲ. ಆದ್ದರಿಂದ ನಾಮಫಲಕವನ್ನು 3 ಕಡೆ ಅಳವಡಿಸಲಾಗುವುದು. ಜತೆಗೆ, ಅವರ ಪ್ರತಿಮೆಯನ್ನೂ ಪ್ರತಿಷ್ಠಾಪಿಸಲಾಗುವುದು ಎಂದರು.