

ಮೈಸೂರು: ‘ಪ್ರಿನ್ಸಸ್’ ರಸ್ತೆ ಎಂಬುದಕ್ಕೆ ಸಾಕಷ್ಟು ದಾಖಲೆಗಳಿವೆ. ಇದಕ್ಕೆ ಯಾವುದೇ ಕಾರಣಕ್ಕೂ ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಎಂದು ಹೆಸರಿಡಬಾರದು ಎಂದು ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್ ಒತ್ತಾಯಿಸಿದರು.
‘ಪ್ರಿನ್ಸಸ್ ರಸ್ತೆ ಎಂಬುದಕ್ಕೆ ಯಾವುದೇ ದಾಖಲೆ ಇಲ್ಲ’ ಎಂಬ ವಿಚಾರ ಹಿನ್ನೆಲೆಯಲ್ಲಿ ಅವರ ನೇತೃತ್ವದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ, ಭಾನು ಮೋಹನ್, ಅರವಿಂದಶರ್ಮ ಅವರು ಮೈಸೂರು ಮಹಾನಗರ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿ ದಾಖಲೆ ಸಮೇತ ಮನವಿ ಸಲ್ಲಿಸಿದ್ದಾರೆ.
ಬಳಿಕ ಮಾತನಾಡಿದ ಪ್ರೊ.ನಂಜರಾಜೇ ಅರಸ್ ಅವರು, ನಗರಪಾಲಿಕೆ ಆಯುಕ್ತರು ‘ಪ್ರಿನ್ಸಸ್ ರಸ್ತೆ’ ಎಂಬುದಕ್ಕೆ ಯಾವುದೇ ದಾಖಲೆ ಇಲ್ಲ ಎಂದಿದ್ದರು. ದಾಖಲೆ ಪರಿಶೀಲನೆ ನಡೆಸಿ ಎಂದು ಮನವಿ ಮಾಡಿದ್ದೇವೆ ಎಂದರು.
ಸಿದ್ದರಾಮಯ್ಯ ಹೆಸರಿಡಲು ಕೆಲವರು ಮುಂದಾಗಿದ್ದಾರೆ. ನಾನು ಕೂಡ ಸಿದ್ದರಾಮಯ್ಯನವರ ಅಭಿಮಾನಿ. ಸಿದ್ದರಾಮಯ್ಯನವರೇ ಈ ಹೆಸರು ಇಡುವುದನ್ನು ತಡೆಯಬೇಕು. ಈ ಸಂಬಂಧ ಸಿದ್ದರಾಮಯ್ಯರನ್ನು ಕೂಡ ಭೇಟಿ ಮಾಡಿ ಮನವರಿಕೆ ಮಾಡುತ್ತೇನೆ ಎಂದರು.
ಪ್ರಿನ್ಸಸ್ ರಸ್ತೆ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ಮಹಾನಗರಪಾಲಿಕೆ ಆಯುಕ್ತರು ಹೇಳಿರುವುದು ಅಹಂಕಾರದಿಂದ ಕೂಡಿದೆ. ಯಾರನ್ನೋ ಮೆಚ್ಚಿಸಲು, ಓಲೈಸಲು ಯಾವುದೇ ದಾಖಲೆಗಳಿಲ್ಲ ಎಂದು ಹೇಳಿರುವುದು ಸರಿಯಲ್ಲ. ಇತಿಹಾಸವನ್ನು ಎಂದಿಗೂ ಮರೆಯಬಾರದು ಎಂದು ಕಿಡಿಕಾರಿದರು.
ಸಾಮಾಜಿಕ ಕಾರ್ಯಕರ್ತ ಸ್ನೇಮಮಯಿ ಕೃಷ್ಣ ಮಾತನಾಡಿ, ಈ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು ನಾಮಕರಣ ಮಾಡಿದರೆ ಹೋರಾಟ ನಿಶ್ಚಿತ ಎಂದು ಎಚ್ಚರಿಸಿದರು.
ಈ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡರೆ ಹೋರಾಟ ಮಾಡಲಾಗುವುದು. ಯಾವುದೇ ಕಾರಣಕ್ಕೂ ರಸ್ತೆಗೆ ಸಿಎಂ ಹೆಸರು ಇಡಬಾರದು. ಆ ರಸ್ತೆಗೆ ಪ್ರಿನ್ಸಸ್ ರಸ್ತೆ ಎಂಬ ಹೆಸರಿದೆ. ಆ ಹೆಸರನ್ನು ಹಾಗೆಯೇ ಉಳಿಸಬೇಕು. ನಾವು ಸಿದ್ದರಾಮಯ್ಯರ ಹೆಸರು ಇಡುವುದು ಬೇಡ ಎನ್ನುತ್ತಿಲ್ಲ. ಆದರೆ, ಈ ರಸ್ತೆಗೆ ಬೇಡ. ಸಿದ್ದರಾಮಯ್ಯ ಹೆಸರನ್ನು ಬೇರೆ ರಸ್ತೆಗೆ ಇಡಲಿ. ಇತಿಹಾಸ ಪ್ರಸಿದ್ಧ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವುದು ಬೇಡ ಎಂದು ಆಗ್ರಹಿಸಿದರು.
ಪ್ರಿನ್ಸಸ್ ರಸ್ತೆ ಎಂಬುದಕ್ಕೆ ಯಾವುದೇ ದಾಖಲೆ ಇಲ್ಲ ಎಂದು ಶಾಸಕ ಹರೀಶ್‌ಗೌಡರು ಹೇಳಿದ್ದಾರೆ. ಆದರೆ, ಚಾಮರಾಜ ಕ್ಷೇತ್ರದ ಮತಗಟ್ಟೆ ಸಂಖ್ಯೆ 116ರಲ್ಲಿ ಪ್ರಿನ್ಸಸ್ ರಸ್ತೆ ಎಂದಿದೆ. ಇದು ಗೊತ್ತಿದ್ದರೂ ಸಿದ್ದರಾಮಯ್ಯ ಹೆಸರಿಡಲು ಮುಂದಾಗಿದ್ದಾರೆ. ಕೂಡಲೇ ಇದನ್ನು ಇಲ್ಲಿಗೆ ಕೈ ಬಿಡಬೇಕು. ಇಲ್ಲವಾದಲ್ಲಿ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದರು.
ಪ್ರಿನ್ಸಸ್ ರಸ್ತೆ ಹೆಸರಿನ ನಾಮಫಲಕದ ಸ್ಟಿಕ್ಕರ್ ಅನ್ನು ರಾತ್ರೋರಾತ್ರಿ ತೆರವು ಮಾಡಲಾಗಿದೆ. ಬುಧವಾರ ದಿಢೀರಾಗಿ ಕೆಆರ್‌ಎಸ್ ರಸ್ತೆಯಲ್ಲಿ ಪ್ರಿನ್ಸಸ್ ರಸ್ತೆ ಎಂದು ಸ್ಟಿಕ್ಕರ್ ಅಂಟಿಸಿ ಕರ್ನಾಟಕ ರಾಷ್ಟ್ರಸೇನೆ ಸಂಘಟನೆ ಸೇರಿದಂತೆ ಇನ್ನಿತರ ಸಂಘಟನೆಗಳ ಸದಸ್ಯರು ಪೂಜೆ ಮಾಡಿದ್ದರು.
ಚೆಲುವಾಂಬ ಉದ್ಯಾನದ ವಿವೇಕಾನಂದ ಪ್ರತಿಮೆ ಬಳಿ ಹಾಗೂ ವಿವಿಧೆಡೆ ಪ್ರಿನ್ಸಸ್ ರಸ್ತೆ ಎಂಬ ನಾಮಫಲಕ ಅಳವಡಿಕೆ ಮಾಡಲಾಗಿತ್ತು. ಪ್ರಿನ್ಸಸ್ ರಸ್ತೆ ಹೆಸರನ್ನು 1921ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಉದ್ಘಾಟಿಸಿದ್ದಾರೆ ಎಂಬ ಮಾಹಿತಿ ಸ್ಟಿಕ್ಕರ್‌ನಲ್ಲಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಕೃಷ್ಣರಾಜಮ್ಮಣ್ಣಿ ಭಾವಚಿತ್ರ ಸಹ ಅದರಲ್ಲಿ ಅಂಟಿಸಲಾಗಿತ್ತು.
ಆದರೀಗ ರಾತ್ರೋರಾತ್ರಿ ಸ್ಟಿಕ್ಕರ್ ತೆರವು ಮಾಡಲಾಗಿದೆ. ಅದನ್ನು ಮಾಡಿದ್ದು ಯಾರು? ಅಧಿಕಾರಿಗಳು ತೆಗೆಸಿದ್ದಾರೆಯೇ? ಪೊಲೀಸರು ತೆಗೆಸಿದ್ದಾರೆ ಎಂಬುದು ಖಚಿತವಾಗಿಲ್ಲ. ಸ್ಥಳದಲ್ಲಿ ಸ್ಟಿಕ್ಕರ್ ಅಂಟಿಸಲಾಗಿತ್ತು ಎಂಬುದಕ್ಕೆ ಯಾವುದೇ ಕುರುಹು ಬಿಟ್ಟಿಲ್ಲ. ನಿನ್ನೆ ಪೂಜೆ ಮಾಡಿದ್ದ ಹೂವು ಹಾಗೂ ಅರಿಶಿಣ ಕುಂಕುಮದ ಕುರುಹುಗಳು ಮಾತ್ರ ಕಾಣಸಿಗುತ್ತಿದೆ.
ಡಿಸಿ ವೆಬ್‌ನಲ್ಲಿ ‘ಪ್ರಿನ್ಸಸ್ ರಸ್ತೆ’ ಉಲ್ಲೇಖ: ಮೈಸೂರು ಜಿಲ್ಲಾಡಳಿತ ವೆಬ್‌ಸೈಟ್‌ನಲ್ಲೇ ‘ಪ್ರಿನ್ಸಸ್ ರಸ್ತೆ’ಯ ಹೆಸರು ಉಲ್ಲೇಖವಾಗಿದೆ. ವೆಬ್‌ಸೈಟ್‌ನಲ್ಲಿ ಪ್ರವಾಸಿತಾಣಗಳ ಮಾಹಿತಿಯಿದ್ದು, ರೈಲ್ವೆ ವಸ್ತುಸಂಗ್ರಹಾಲಯ ಇರುವ ಸ್ಥಳದ ರಸ್ತೆಯ ಬಗ್ಗೆಯೂ ಈ ಹೆಸರು ನಮೂದಿಸಲಾಗಿದೆ.