

ವಿಜಯಪುರ: ಪೀರಾಪುರ- ಬೂದಿಹಾಳ ಏತ ನೀರಾವರಿ ಯೋಜನೆಯಡಿ ಪ್ರಾಯೋಗಿಕವಾಗಿ ನೀರು ಹರಿದಿದ್ದು, ಈ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಸಂತಸ ವ್ಯಕ್ತಪಡಿಸಿದ್ದಾರೆ.
ವಿಜಯಪುರದ ಗೃಹ ಕಚೇರಿಯಲ್ಲಿ ಶುಕ್ರವಾರ ಕೆಬಿಜೆಎನ್‌ಎಲ್ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ ಅವರು, ಯೋಜನೆಯ ಪ್ರಗತಿ ಮತ್ತು ಬಾಕಿ ಕಾಮಗಾರಿಗಳ ಕುರಿತು ಮಾಹಿತಿ ಪಡೆದರು.
ಈ ಯೋಜನೆಯನ್ನು ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಮಂಜೂರು ಮಾಡಿ 2017ರ ನ. 25ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿ 523.03 ಕೋಟಿ ರೂ. ವೆಚ್ಚದ ಮೊದಲ ಹಂತದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಈಗ ಮತ್ತೆ ನಮ್ಮ ಸರ್ಕಾರ ಅಧಿಕಾರದಲ್ಲಿರುವಾಗ ಪ್ರಾಯೋಗಿಕವಾಗಿ ನೀರು ಹರಿದಿರುವುದು ಸಂತಸವನ್ನು ಇಮ್ಮಡಿಗೊಳಿಸಿದೆ ಎಂದರು.
ಈಗ ನಾರಾಯಣಪುರ ಜಲಾಶಯದ ಬಳಿ ಪಂಪ್‌ಗಳನ್ನು ಪ್ರಾಯೋಗಿವಾಗಿ ಚಾಲನೆ ಮಾಡಿ ತಾಳಿಕೋಟೆ ತಾಲೂಕಿನ ಶಳ್ಳಗಿ ಬಳಿ ಇರುವ ಡೆಲಿವರಿ ಚೇಂಬರ್‌ವರೆಗೆ ನೀರು ಹರಿಸಿರುವುದು ಸಂತಸದ ವಿಷಯ. ಈಗಾಗಲೇ ಜಿಲ್ಲೆಯಲ್ಲಿ ಒಟ್ಟು 464 ಕಿಮೀ ಪೈಕಿ 450 ಕಿಮೀ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದ್ದು ಇನ್ನುಳಿದ 14 ಕಿಮೀ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ನೀರು ಹರಿಸಬೇಕು. ಈ ಯೋಜನೆಗೆ ಇರುವ ಅಡೆತಡೆ ನಿವಾರಣೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.
ಈ ಯೋಜನೆಯಿಂದ ಪೈಪ್‌ಲೈನ್ ಮೂಲಕ ಜಿಲ್ಲೆಯ ದೇವರಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ 20,243 ಹೆಕ್ಟೇರ್ ಪ್ರದೇಶಕ್ಕೆ ಮತ್ತು ಯಾದಗಿರಿ ಜಿಲ್ಲೆಯ ಸುರಪುರ ಮತ್ತು ಶಹಾಪುರ ತಾಲೂಕುಗಳ 17,805 ಹೆಕ್ಟೇರ್ ಪ್ರದೇಶಗಳಿಗೆ ಎರಡನೇ ಹಂತದಲ್ಲಿ 316.97 ಕೋಟಿ ರೂ. ವೆಚ್ಚದಲ್ಲಿ ನೀರಾವರಿ ಕಲ್ಪಿಸುವ ಯೋಜನೆ ಇದಾಗಿದೆ. ಅಲ್ಲದೇ, ಸುರಪುರ ಮತ್ತು ಶಹಾಪುರ ತಾಲೂಕಗಳ 17 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯೂ ಇದರಲ್ಲಿ ಸೇರಿದೆ ಎಂದು ಸಚಿವರು ಈ ಹಿಂದೆ ತಾವು ಜಲಸಂಪನ್ಮೂಲ ಸಚಿವರಾಗಿದ್ದಾಗ ರೂಪಿಸಲಾದ ಯೋಜನೆಯ ಮಾಹಿತಿಯನ್ನು ಹಂಚಿಕೊಂಡರು.
ಕೆಬಿಜೆಎನ್‌ಎಲ್ ಮಾಜಿ ನಿರ್ದೇಶಕ ಪ್ರೊ. ಅರವಿಂದ ಗಲಗಲಿ, ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ, ಕೆಬಿಜೆಎನ್‌ಎಲ್ ಸುಪರಿಂಟೆಂಡೆಂಟ್ ಇಂಜಿನಿಯರ್ ಜಗದೀಶ ರಾಠೋಡ, ಎಕ್ಸಿಕ್ಯೂಟಿವ್ ಇಂಜಿನಿಯರ್ ವಿ.ಆರ್. ಹಿರೇಗೌಡರ, ಅಸಿಸ್ಟಂಟ್ ಇಂಜಿನಿಯರ್ ಶಂಕರ ಬಂಡಿವಡ್ಡರ, ಮಾರುತಿ ಕದಂ, ಅಸಿಸ್ಟಂಟ್ ಇಂಜಿನಿಯರ್ ವಿಶ್ವನಾಥ ಬಿರಾದಾರ ಮತ್ತು ಶಿವಾನಂದ ಬಿರಾದಾರ ಉಪಸ್ಥಿತರಿದ್ದರು.