ಪ್ರಾಮಾಣಿಕ ಸೇವೆಗೆ ಒತ್ತು

14Rajesh6
Published on

ಚಾಮರಾಜನಗರ: ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ. ಕ್ಷೇತ್ರದ ಜನರು ನನ್ನನ್ನು ಆಯ್ಕೆ ಮಾಡಿದ್ದಾರೆ. ನನ್ನ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಹೇಳಿದರು.

ಚಾಮರಾಜನಗರ ತಾಲೂಕಿನ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹರವೆ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆ ಹಾಗೂ 1 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ನನ್ನನ್ನು ಆಯ್ಕೆ ಮಾಡಿರುವ ಮತದಾರರ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕಾರ್ಯನಿರ್ವಹಿಸುತ್ತೇನೆ. ಈಗಾಗಲೇ ಪಂಚಾಯಿತಿ ಕಟ್ಟಡ ಉದ್ಘಾಟನೆಯಾಗಿದೆ. ಈ ಹಿಂದಿನ ಶಾಸಕರು 3 ಕೋಟಿ ರೂ. ಬಿಡುಗಡೆ ಮಾಡಿಸಿದ್ದರು ಅಷ್ಟೇ ಆದರೆ, ಅನುದಾನ ಬಂದಿರಲಿಲ್ಲ. ಇದನ್ನು ನಾನು ಸಿಎಂ ಸಿದ್ದರಾಮಯ್ಯ ಅವರ ಮುಖಾಂತರ ಮಂಜೂರು ಮಾಡಿಸಿ, ಕಾಮಗಾರಿ ಆರಂಭವಾಗಿದೆ. ಇದು ಸಹಜ ಪ್ರಕ್ರಿಯೆ ಆಗಿದೆ ಎಂದರು.

ಹರವೆ ಗ್ರಾಮದ ಜನರು ಶಾಂತಿ ಹಾಗೂ ಸಮನ್ವತೆಯಿಂದ ಬಾಳ್ವೆ ಮಾಡಲು ಮುಂದಾಗಬೇಕು. ರಾಜಕೀಯ ಬರುತ್ತದೆ ಹೋಗುತ್ತದೆ. ಆದರೆ, ಪ್ರೀತಿ, ವಿಶ್ವಾಸದಿಂದ ಅಭಿವೃದ್ಧಿ ಕಡೆಗೆ ಎಲ್ಲರೂ ಒಗ್ಗಟ್ಟಿನಿಂದ ಸಾಗೋಣ ಎಂದು ತಿಳಿಸಿದರು. ಹರವೆ ಗ್ರಾಪಂ ಅಧ್ಯಕ್ಷ ಎಚ್.ಎಸ್. ಗಿರೀಶ್, ಉಪಾಧ್ಯಕ್ಷರಾದ ರಾಜಮ್ಮ, ಜಿಪಂ ಮಾಜಿ ಅಧ್ಯಕ್ಷ ನವೀನ್ ಕೆರೆಹಳ್ಳಿ, ಗ್ರಾಪಂ ಸದಸ್ಯ ಮಹೇಶ್, ಮಂಜುಳಾ, ನಟರಾಜು, ಉಮಾ ಮಹೇಶ್ವರಿ, ಮಂಗಳಮ್ಮ, ಪುಟ್ಟಮ್ಮ, ಮಹದೇವಸ್ವಾಮಿ, ದೇವಮ್ಮಣಿ, ರತ್ನಮ್ಮ, ಲಿಂಗಣ್ಣ, ಮಾದಪ್ಪ, ತಾಪಂ ಇಒ ಪೂರ್ಣಿಮಾ, ಮಾಜಿ ತಾಪಂ ಸದಸ್ಯ ಉದಯಕುಮಾರ್, ಗುರುಸಿದ್ದೇಗೌಡ, ಪಿಡಿಒ ಎಂ.ಬಿ.ಉಮಾದೇವಿ, ಕಾರ್ಯದರ್ಶಿ ಮಹದೇವಯ್ಯ, ಗೂಳಿಪುರ ನಾಗೇಂದ್ರ, ನಾಗೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net