ಪ್ರಾಮಾಣಿಕ ವ್ಯವಹಾರದಿಂದ ಸಂಘಗಳು ಸದೃಢ

15 tth 01
ತೀರ್ಥಹಳ್ಳಿ ಸಹ್ಯಾದ್ರಿ ವಿವಿಧೋದ್ದೇಶ ಅಡಕೆ ಬೆಳೆಗಾರರ ಸಹಕಾರ ಸಂಘ ಮತ್ತು ಶರಾವತಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಬಿ.ವೈ.ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು. ಡಿ.ಚನ್ನವೀರಪ್ಪ, ರೇವತಿ, ಸಿ.ಕೆ.ಪ್ರಸನ್ನ, ವಿನಂತಿ ಶಿವಾನಂದ, ಶಶಿ, ಅಮರನಾಥ ಶೆಟ್ಟಿ ಇತರರಿದ್ದರು.
Published on

ತೀರ್ಥಹಳ್ಳಿ: ಸಹಕಾರಿ ವ್ಯವಸ್ಥೆಯಲ್ಲಿ ಷೇರುದಾರರ ನಿರೀಕ್ಷೆಗೆ ಪೂರಕವಾಗಿ, ವಿಶ್ವಾಸಾರ್ಹತೆಯೊಂದಿಗೆ ಪ್ರಾಮಾಣಿಕ ವ್ಯವಹಾರ ಮಾಡಿದಾಗ ಸಂಸ್ಥೆ ಸಧೃಡವಾಗಿ ಬೆಳೆಯುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಪಟ್ಟಣದ ಗೋಪಾಲ ಗೌಡ ರಂಗಮಂದಿರದಲ್ಲಿ ಸೋಮವಾರ ನಡೆದ ಸಹ್ಯಾದ್ರಿ ವಿವಿಧೋದ್ದೇಶ ಅಡಕೆ ಬೆಳೆಗಾರರ ಸಹಕಾರ ಸಂಘ ಮತ್ತು ಶರಾವತಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ವಾರ್ಷಿಕ 1700 ಕೋಟಿ ರೂ. ವ್ಯವಹಾರ ನಡೆಸಿರುವ ಸಹಕಾರಿ ಸಂಘದ ಸಾಧನೆ ಒಂದು ರಾಷ್ಟ್ರೀಯ ಬ್ಯಾಂಕಿನ ಸಾಧನೆಯಂತಿದೆ ಎಂದರು.

ಮಲೆನಾಡು ಭಾಗದ ಅಡಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ರಾಜ್ಯದ ಸಂಸದರು ಮತ್ತು ಕೃಷಿ ಕ್ಷೇತ್ರದ ಪ್ರಮುಖರ ನಿಯೋಗ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಸಮಸ್ಯೆಯನ್ನು ಮನವರಿಕೆ ಮಾಡಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಪೂರ್ಣ ಭರವಸೆ ನೀಡಿದೆ. ಮೈಲುತುತ್ತದ ಕಾಪರ್ ಸಲೆಓಂೀಟ್ ಮೇಲಿನ ಜಿಎಸ್‌ಟಿಯನ್ನು ಶೇ.5ರಷ್ಟು ಇಳಿಸಲು ಸರ್ಕಾರ ಒಪ್ಪಿಗೆ ನೀಡಿದೆ ಎಂದರು.

ಸಂಘದ ಅಧ್ಯಕ್ಷ ವಿಜಯದೇವ್ ಮಾತನಾಡಿ, ರಾಜಕೀಯದಿಂದ ಹೊರತಾಗಿರುವ ಈ ಸಂಸ್ಥೆಯ ಬೆಳವಣಿಗೆಯಲ್ಲಿ ಎಲ್ಲ ಪಕ್ಷದವರ ಬೆಂಬಲ ನಿರ್ಣಾಯಕವಾಗಿದೆ. ಸಂಸದ ರಾಘವೇಂದ್ರ ಅವರ ಕಾರ್ಯಗಳು ಮಾದರಿಯಾಗಿವೆ. ಸಚಿವ ಸ್ಥಾನವನ್ನು ಅಲಂಕರಿಸುವಂತಾಗಲಿ ಎಂದು ಆಶಿಸಿದರು.

ಶರಾವತಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ವಿ.ಅಜಿತ್ ಮಾತನಾಡಿ, ಸಂಘದಿಂದ ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಸಲುವಾಗಿ ಪೆಟ್ರೋಲ್ ಬಂಕ್, ಲೂಬ್ರಿಕೆಂಟ್, ಹಾಲು, ಪೇಪರ್ ಸಹಿತ ಎಲ್ಲ ರೀತಿಯ ಸವಲತ್ತುಗಳನ್ನು ಒದಗಿಸಲಾಗುತ್ತಿದೆ ಎಂದರು.

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಡಿ.ಚನ್ನವೀರಪ್ಪ, ರೇವತಿ ಅನಂತಮೂರ್ತಿ, ಸಿ.ಕೆ.ಪ್ರಸನ್ನ, ವಿನಂತಿ ಶಿವಾನಂದ, ಶಶಿ, ಅಮರನಾಥ ಶೆಟ್ಟಿ, ಕೆ.ಎಂ.ಮೋಹನ್, ಕಾರ್ಯದರ್ಶಿ ಚಂದ್ರಕಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net