ಪ್ರಾಮಾಣಿಕ ಜನಸೇವೆ ಅತ್ಯಂತ ಶ್ರೇಷ್ಠ

DCD
Published on

ಚಿತ್ರದುರ್ಗ: ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುವ ಜವಾಬ್ದಾರಿ ಸರ್ಕಾರಿ ಅಧಿಕಾರಿಗಳು, ನೌಕರರದ್ದಾಗಿದೆ. ಹೀಗಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದೇ ಅತ್ಯಂತ ಶ್ರೇಷ್ಠ ಎಂದು ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಸಲಹೆ ನೀಡಿದರು.

ಜಿಪಂ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ರಾಜ್ಯ ಲೋಕಾಯುಕ್ತ ಚಿತ್ರದುರ್ಗ ವಿಭಾಗದಿಂದ ಹಮ್ಮಿಕೊಂಡಿದ್ದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೋಟ್ಯಾಂತರ ಜನಸಂಖ್ಯೆಯಲ್ಲಿ ಶೇ 2ರಷ್ಟು ಮಂದಿ ಮಾತ್ರ ಸರ್ಕಾರಿ ನೌಕರರಿದ್ದು, ವೇತನಕ್ಕಾಗಿ ಕಾರ್ಯನಿರ್ವಹಿಸದೆ, ಅದನ್ನು ಮೀರಿ ಉಳಿದ ಶೇ 98ರಷ್ಟು ಜನರ ಒಳಿತಿಗಾಗಿ, ರಾಷ್ಟ್ರ ಸದೃಢಗೊಳಿಸಲು ಶ್ರಮಿಸಬೇಕು. ಈ ಜವಾಬ್ದಾರಿಯನ್ನು ಚಾಚು ತಪ್ಪದೇ ನಿಭಾಯಿಸಬೇಕು ಎಂದು ಕಿವಿಮಾತು ಹೇಳಿದರು.

ಸರ್ಕಾರದ ಯೋಜನೆ ಸಾರ್ವಜನಿಕರಿಗೆ ತಲುಪಿಸಲು ವಿಳಂಬ ನೀತಿ ಸಲ್ಲದು. ಜನರ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸದೆ ಇರುವುದು, ಕರ್ತವ್ಯದಲ್ಲಿ ಬೇಜಾಬ್ದಾರಿ, ನಿರ್ಲಕ್ಷ ತೋರುವುದು, ಅಸಮರ್ಪಕ ಆಡಳಿತ ನಡೆಸುವುದು ಕೂಡ ಭ್ರಷ್ಟಾಚಾರವಾಗಿದೆ ಎಂದರು.

ಭ್ರಷ್ಟಾಚಾರ ಕಾಯ್ದೆ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲಾ ಇಲಾಖೆ ಅಧಿಕಾರಿಗಳು ಕೈಜೋಡಿಸಿ, ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಮಾತನಾಡಿ, ಅಧಿಕಾರಿಗಳು, ನೌಕರರು ಸರ್ಕಾರದ ಯೋಜನೆ, ಸೌಲಭ್ಯ ನಿಗದಿತ ಅವಧಿಯೊಳಗೆ ಅರ್ಹರಿಗೆ ತಲುಪಿಸಿ. ಭ್ರಷ್ಟಾಚಾರ ವಿರೋಧಿಸಿ, ರಾಷ್ಟ್ರ ನಿರ್ಮಾಣದ ಕೆಲಸದಲ್ಲಿ ತೊಡಗಿ ಎಂದು ಕಿವಿಮಾತು ಹೇಳಿದರು.

ದೂರುಗಳು ಹೆಚ್ಚಾಗಿವೆ: ಚಿತ್ರದುರ್ಗ ಲೋಕಾಯುಕ್ತ ಎಸ್‌ಪಿ ಎನ್.ವಾಸುದೇವರಾಮ ಮಾತನಾಡಿ, ನಗರ ಸ್ಥಳೀಯ ಸಂಸ್ಥೆಗಳು, ಗ್ರಾಪಂ ಮತ್ತು ತಾಪಂ ಕಾರ್ಯಾಲಯ, ಕಂದಾಯ ಇಲಾಖೆ, ಉಪನೋಂದಣಾಧಿಕಾರಿ ಕಚೇರಿ ಸಂಬಂಧ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಲೋಕಾಯುಕ್ತ ಕಚೇರಿಗೆ ಬರುತ್ತಿವೆ. ಹೀಗಾಗಿ ತಹಸೀಲ್ದಾರ್, ತಾಪಂ ಇಒ ಕಚೇರಿಗೆ ಡಿಸಿ, ಜಿಪಂ ಸಿಇಒ ಅವರು ತಿಂಗಳಿಗೊಮ್ಮೆ ಭೇಟಿ ನೀಡಿ ಸ್ವೀಕೃತವಾಗುವ ಅರ್ಜಿ ಪರಿಶೀಲಿಸಬೇಕು. ಬಾಕಿ ಇರುವ ಅರ್ಜಿ ಇತ್ಯರ್ಥಕ್ಕೆ ಆದೇಶಿಸಬೇಕು ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಎಸಿ ಎಂ.ಕಾರ್ತಿಕ್, ಲೋಕಾಯುಕ್ತ ಚಿತ್ರದುರ್ಗ ಡಿವೈಎಸ್‌ಪಿ ಎನ್.ಮೃತ್ಯುಂಜಯ, ಇನ್ಸ್‌ಪೆಕ್ಟರ್‌ಗಳಾದ ವಸಂತ್‌ಕುಮಾರ್, ಶಿಲ್ಪಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net