

ಚಿತ್ರದುರ್ಗ: ಹನ್ನೆರಡನೇ ಶತಮಾನದ ಬಸವಾದಿ ಶರಣರು, ವಚನಕಾರರು ಕಾಯಕ, ದಾಸೋಹಕ್ಕೆ ಪ್ರಾಧಾನ್ಯತೆ ನೀಡಿ, ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ್ದರು ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಪಿ.ಎಸ್. ಶಂಕರ್ ಹೇಳಿದರು.
ಶ್ರೀ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ 35ನೇ ವರ್ಷದ 4ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ದುಡಿಯುವ ವರ್ಗದಲ್ಲಿ ಜಾತಿ, ಅಸ್ಪಶ್ಯತೆ ಇಲ್ಲ. ಪ್ರತಿಯೊಬ್ಬರೂ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು. ಕಾಯಕದಲ್ಲಿ ಪ್ರಾಮಾಣಿಕತೆ ಇದ್ದಾಗ ಮಾತ್ರ ನೆಮ್ಮದಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.
ವಿವಾಹಗಳು ಸರಳವಾಗಿರಬೇಕು. ಬದುಕನ್ನು ಸಹ ಸರಳಗೊಳಿಸಿಕೊಳ್ಳಬೇಕು. ಉತ್ತಮ ಸಂಸ್ಕಾರ, ಸಂಸ್ಕೃತಿ ಬೆಳೆಸಿಕೊಂಡು ಮುಂದಿನ ಪೀಳಿಗೆಗೆ ಶ್ರೇಷ್ಠ ದಾರಿ ಮಾಡಿಕೊಡಬೇಕು ಎಂದು ತಿಳಿಸಿದರು.
ಬಸವಾದಿ ಪ್ರಮಥರ ಆಶಯಗಳನ್ನು ನಾವಿಂದು ಈಡೇರಿಸಬೇಕಿದೆ. ಬಸವ ಪರಂಪರೆ ಮಠಮಾನ್ಯಗಳು ವಚನಕಾರರ ವಿಚಾರಧಾರೆಗಳನ್ನು ಸಮಾಜಕ್ಕೆ ನೀಡುತ್ತಿವೆ. ಶ್ರೀಮಠದಲ್ಲಿ 35 ವರ್ಷಗಳಿಂದ ನಿರಂತರವಾಗಿ ವಿವಾಹ ಕಾರ್ಯಕ್ರಮ ನಡೆದುಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ವ್ಯಕ್ತಿಯ ವರ್ತನೆ, ಆಲೋಚನೆಗಳು ಇತರರಿಗೆ ನೋವಾಗದಂತೆ ಇರಬೇಕು. ಮಾನವ ಕತ್ತಲೆಯಿಂದ ಬೆಳಕಿನೆಡೆಗೆ ಸಾಗಬೇಕು. ವಚನ ಸಾಹಿತ್ಯ ಇಂದಿಗೂ ನಮ್ಮನ್ನು ಬೆಳಕಿನೆಡೆಗೆ, ಉತ್ತಮ ಬದುಕಿನ ಕಡೆಗೆ ಕರೆದುಕೊಂಡು ಹೋಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಡಾ. ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ, ದುಂದುವೆಚ್ಚ ಮಾಡದೆ, ಆದರ್ಶ ವಿವಾಹವಾಗಿರುವ ನವ ಜೋಡಿಗಳು ಮುಂದಿನ ಜನರಿಗೆ ದಾರಿ ದೀಪವಾಗಬೇಕು. ದುಂದುವೆಚ್ಚದ ಮದುವೆಗಳಿಗೆ ಕಡಿವಾಣ ಹಾಕುವ ಮೂಲಕ ನಾವು ಇತರರಿಗೆ ಮಾದರಿಯಾಗಿ ಬದುಕಬೇಕು ಎಂದು ತಿಳಿಸಿದರು.
ದಾವಣಗೆರೆ ವಿರಕ್ತಮಠದ ಡಾ.ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಸಂಸಾರ ಎನ್ನುವುದು ಸಾಗರ ಇದ್ದ ಹಾಗೆ. ಸಂಸಾರದಲ್ಲಿ ಪ್ರೀತಿ, ನಂಬಿಕೆ, ವಿಶ್ವಾಸ ಇರಬೇಕು ಎಂದರು.
ಶ್ರೀ ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ಮಹಾಮನೆಯಲ್ಲಿ ಎಲ್ಲರನ್ನು ನಮ್ಮವರು ಎಂದು ಭಾವಿಸುತ್ತಿದ್ದರು. ಇಂತಹ ಸಾಮೂಹಿಕ ಮಹೋತ್ಸವವೂ ಇದಕ್ಕೆ ಉದಾಹರಣೆಯಾಗುತ್ತದೆ. ಬದುಕಿನಲ್ಲಿ ಸಹೋದರತೆ, ಸಮಾನತೆಯಿಂದ ವರ್ತಿಸಬೇಕು. ಯಾವುದೇ ಕಾಯಕ ಕೀಳಲ್ಲ. ದೇಹ ಅಂತರಂಗ ಶುದ್ಧಿ, ಬಹಿರಂಗ ಶುದ್ಧಿಯಿಂದ ಕೂಡಿರಬೇಕು. ಅರಿವನ್ನು ಆಚರಣೆಗೆ ತರಬೇಕೆಂದರು.
ಎರಡು ಜೋಡಿ ಅಂತರ್ಜಾತಿ, ಆಂಧ್ರ ಪ್ರದೇಶದ ಒಂದು ಜೋಡಿ ಸೇರಿ 14 ಜೋಡಿಗಳ ವಿವಾಹ ನೆರವೇರಿತು. ಜಮುರಾ ಕ ಲಾವಿದ ಉಮೇಶ್‌ಪತ್ತಾರ್ ಪ್ರಾರ್ಥಿಸಿದರು. ವಿಜಯದೇವರು ಸ್ವಾಗತಿಸಿ, ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು.