ಪ್ರಾಪ್ತಿ ಅರಳಿಗೆ ರಾಷ್ಟ್ರ ಪ್ರಶಸ್ತಿ

prapti arali
Published on

ಬೀದರ್: ಕಳೆದ ತಿಂಗಳು `ನನ್ನ ಕನಸು-ನನ್ನ ಯೋಜನೆ' ಕುರಿತ ರಾಷ್ಟ್ರ ಮಟ್ಟದ ವಿಡಿಯೋ ಭಾಷಣ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ, ರಾಷ್ಟ್ರಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದ ಇಲ್ಲಿನ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಪ್ರಾಪ್ತಿ ಅರಳಿ ಇದೀಗ ಮತ್ತೊಂದು ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಪ್ರತಿಭೆ ಪ್ರದರ್ಶಿಸಿದ್ದಾಳೆ.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ತನ್ನ ರೇಂಜರಿಂಗ್ ನ ಶತಮಾನೋತ್ಸವದ ನಿಮಿತ್ತ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ದಿವಾಸ್-ಅರೌಂಡ್ ದಿ ವಲ್ಡ್೯ ಶೀರ್ಷಿಕೆಯಡಿ ದೇಶದ ಮಹಿಳಾ ಸಾಧಕಿಯರ ಕುರಿತು ಅವರ ವಸ್ತ್ರ ವಿನ್ಯಾಸದೊಂದಿಗೆ ಬದುಕು ಮತ್ತು ಸಾಧನೆ ಹಾಗೂ ದೇಶಕ್ಕೆ ನೀಡಿದ ಸಂದೇಶ ಪ್ರಸ್ತುತಪಡಿಸುವ ಸ್ಪರ್ಧೆ ಆಯೋಜಿಸಿತ್ತು. ಇದರಲ್ಲಿ ಪ್ರಾಪ್ತಿ ಅರಳಿ ಮದರ್ ತೆರೆಸಾ ವಸ್ತ್ರ ವಿನ್ಯಾಸದೊಂದಿಗೆ ಅವರ ಜೀವನ ಚರಿತ್ರೆ ಪ್ರದರ್ಶಿಸಿ ಪ್ರಶಸ್ತಿ ಬಾಚಿಕೊಂಡಿದ್ದಾಳೆ.

ದೇಶದ ಎಲ್ಲ ರಾಜ್ಯಗಳಿಂದ ನೂರಾರು ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಅಂತಿಮ ಹಂತ ಬಂದ 20 ಸ್ಪರ್ಧಾಳುಗಳಲ್ಲಿ ಪ್ರಾಪ್ತಿ, ಎರಡನೇ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯಸ್ಥೆ ಗುರಮ್ಮ ಸಿದ್ದಾರೆಡ್ಡಿ ತಿಳಿಸಿದ್ದಾರೆ.

ಪ್ರಾಪ್ತಿ ಸಾಧನೆಗೆ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ, ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಉಪ ನಿರ್ದೇಶಕ ಚಂದ್ರಕಾಂತ ಶಾಬಾದಕರ್, ಜ್ಞಾನಸುಧಾ ಸಂಸ್ಥೆ ಅಧ್ಯಕ್ಷೆ ಡಾ.ಪೂರ್ಣಾಮಾ, ನಿರ್ದೇಶಕ ಮುನೇಶ್ವರ ಲಾಖಾ, ಗೈಡ್ಸ್ ಆಯುಕ್ತೆ ಲೀಲಾವತಿ ಚಾಕೋತೆ, ಕಾರ್ಯದರ್ಶಿ ಡಾ.ಭರಶೆಟ್ಟಿ, ಜಿಲ್ಲಾ ಸಂಘಟಕ ರಾಚಯ್ಯಾ ನಾಶಿ ಹರ್ಷ ವ್ಯಕ್ತಪಡಿಸಿದ್ದಾರೆ.

ರೇಂಜರಿಂಗ್ ಶತಮಾನೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ ಪ್ರಾಪ್ತಿ ಅರಳಿ ರಾಷ್ಟಮಟ್ಟದಲ್ಲಿ ಸಾಧನೆ ಮಾಡಿ ರಾಜ್ಯ ಮತ್ತು ಜಿಲ್ಲೆಯ ಕೀರ್ತಿ ಹೆಚ್ಚಿಸಿದಂತಾಗಿದೆ. ಈ ಸಾಧನೆ ಇತರೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ.| ಗುರಮ್ಮ ಸಿದ್ದಾರೆಡ್ಡಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯಸ್ಥೆ

ಈ ಸಾಧನೆ ಹೆಮ್ಮೆ ತಂದಿದೆ. ಇದಕ್ಕೆ ಪಾಲಕರ ಪ್ರೋತ್ಸಾಹ ಮತ್ತು ಪ್ರೇರಣೆ ಕಾರಣ. ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬಹುದು. ಸ್ಪರ್ಧೆಗಳಲ್ಲಿ ಸೋಲು, ಗೆಲುವಿಗಿಂತಲೂ ಪಾಲ್ಗೊಳ್ಳುವಿಕೆ ಬಹಳ ಮುಖ್ಯ.| ಪ್ರಾಪ್ತಿ ಅರಳಿ, ವಿಜೇತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net