ಪ್ರಾಧಿಕಾರದಿದ ಆಯ-ವ್ಯಯ ಸಭೆ

Published on

ಚಾಮರಾಜನಗರ: ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ 2025-26ನೇ ಸಾಲಿನ ಆಯ-ವ್ಯಯ ಸಭೆಯನ್ನು ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಕರ್(ಮುನ್ನ) ಅಧ್ಯಕ್ಷತೆಯಲ್ಲಿ ನಡೆಯಿತು.

ಚುಡಾ ಕಚೇರಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಭೆಯಲ್ಲಿ ಚಾಮರಾಜನಗರ-ಮಸಗಾಪುರ ಗ್ರಾಮದ ವಿವಿಧ ಸ.ನಂ.ಗಳಲ್ಲಿ ಒಟ್ಟು 14ಎ-24ಗುಂ ವಿಸ್ತೀರ್ಣದ ಜಮೀನಿಗೆ ವಸತಿ ಯೋಜನೆ ಕೈಗೆತ್ತಿಕೊಂಡಿದ್ದು, ಈ ಸಂಬಂಧ 2021-22ನೇ ಸಾಲಿನ ಎಸ್.ಆರ್ ದರಪಟ್ಟಿಯಂತೆ ರೂ.12.54 ಕೋಟಿ ರೂ.ಗಳ ಅಂದಾಜುಪಟ್ಟಿ ತಯಾರಿಸಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿರುವುದರಿಂದ 2023-24ನೇ ಸಾಲಿನ ಎಸ್.ಆರ್ ದರಪಟ್ಟಿಯಂತೆ ಮರು ಅಂದಾಜುಪಟ್ಟಿ ಸಿದ್ದಪಡಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.

ವಸತಿ ಯೋಜನೆಯಡಿಯಲ್ಲಿ ನಿವೇಶನ ಹಂಚಿಕೆ ಸಂಬಂ ಸಾರ್ವಜನಿಕರಿಂದ ಅರ್ಜಿಗಳನ್ನು ಅಹ್ವಾನಿಸಲಾಗಿತ್ತು. ಸಾರ್ವಜನಿಕರ ಕೋರಿಕೆ ಮೇರೆಗೆ ಮಾ.31ವರೆಗೆ ಅರ್ಜಿಗಳನ್ನು ಆಹ್ವಾನಿಸಲು ಅವಧಿ ವಿಸ್ತರಿಸಲು ನಿರ್ಣಯಿಸಲಾಯಿತು.

ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಕೋಡಿಮೋಳೆ ಕೆರೆಯನ್ನು ಅಭಿವೃದ್ಧಿಪಡಿಸುವ ಸಂಬಂಧ ರೂ.4.25 ಕೋಟಿ ರೂ.ಗಳಿಗೆ ಡಿಪಿಆರ್ ಸಿದ್ದಪಡಿಸಲಾಗಿದ್ದು, ರೂ.2 ಕೋಟಿ ರೂಗಳಿಗೆ ಸರ್ಕಾರದಿಂದ ಅನುಮೋದನೆ ಪಡೆದಿದ್ದು, ಉಳಿಕೆ ರೂ.2.25 ಕೋಟಿಗಳಿಗೆ ಸರ್ಕಾರದ ಅನುಮೋದನೆಗಾಗಿ ಸಲ್ಲಿಸಬೇಕಾಗಿರುವ ಹಿನ್ನೆಲೆಯಲ್ಲಿ ಆಯ-ವ್ಯಯ ಸಭೆಯಲ್ಲಿ ಮಂಡಿಸಿ ನಿರ್ಣಯಿಸಲಾಯಿತು.

ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಚಾಮರಾಜನಗರ, ನಗರಸಭೆ ವಾರ್ಡ್ ನಂ-04 ಬೀಡಿ ಕಾಲೋನಿಯಲ್ಲಿರುವ ಅಜೀಜ್ ಸೇಠ್ ಉದ್ಯಾನವನ ಅಭಿವೃದ್ಧಿಪಡಿಸಲು ಡಿ.ಪಿ.ಆರ್ ಅನ್ನು 44 ಲಕ್ಷ ರೂ.ಗಳಿಗೆ ಅಂದಾಜುಪಟ್ಟಿಯನ್ನು ಸಿದ್ದಪಡಿಸಿದ್ದು, ಸರ್ಕಾರದ ಅನುಮೋದನೆಗೆ ಸಲ್ಲಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಪ್ರಾಧಿಕಾರದ ನಾಮ ನಿರ್ದೇಶನ ಸದಸ್ಯರಾದ ಎಸ್.ರಾಜು, ರಾಜೇಂದ್ರ, ಪುಟ್ಟಸ್ವಾಮಿ, ಅಂಬಿಕಾ. ಜಿಲ್ಲಾ ಆರೋಗ್ಯಾಧಿಕಾರಿ ಚಿದಂಬರಂ, ಸೆಸ್ಕ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಹೇಶ್, ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ಐಶ್ವರ್ಯ, ನಗರಸಭೆಯ ಸಹಾಐಕ ಕಾರ್ಯಪಾಲಕ ಇಂಜಿನಿಯರ್ ನಟರಾಜು, ಪ್ರಾಧಿಕಾರದ ಆಯುಕ್ತ ಎಚ್.ವಿ. ಸೀಮಾ, ನಗರ ಯೋಜಕ ಸದಸ್ಯ ರಿತೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net