

ಮೇಲುಕೋಟೆ: ತಿರುಪತಿಗೆ ಸಮಾನ ಮಹತ್ವವಿರುವ ರಾಮಾನುಜರ ಕರ್ಮಭೂಮಿ ಮೇಲುಕೋಟೆಗೆ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಮಲೆ ಮಹದೇಶ್ವರ ಬೆಟ್ಟದ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುವುದು ನೂತನ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.
ಶಾಸಕರಾಗಿ ಆಯ್ಕೆಯಾದ ನಂತರ ಚೆಲುವನಾರಾಯಣಸ್ವಾಮಿ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಲುಕೋಟೆ ಜಿಲ್ಲೆಯ ಪ್ರಖ್ಯಾತ ಪ್ರವಾಸಿ ಕ್ಷೇತ್ರವಾಗಿದ್ದರೂ ಮೂಲಸೌಕರ್ಯದಿಂದ ವಂಚಿತವಾಗಿದೆ. ಭಕ್ತರು ಮತ್ತು ನಾಗರಿಕರ ಅನುಕೂಲಕ್ಕಾಗಿ ದೇವಾಲಯ ಹಾಗೂ ಬೆಟ್ಟದ ಬಳಿ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಗೂ ಅತ್ಯಾಧುನಿಕ ಶೌಚಗೃಹಗಳನ್ನು ತಕ್ಷಣವೇ ನಿರ್ಮಿಸಲಾಗುವುದು. ಜನರಿಗೆ ಪ್ರತಿದಿನ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು. ದೇವಾಲಯಕ್ಕೆ ಸೇರಿದ ಜಮೀನುಗಳನ್ನು ವಶಕ್ಕೆ ಪಡೆದು ಭಕ್ತರು ಉಳಿದುಕೊಳ್ಳಲು ಅನುಕೂಲವಾಗುವಂತೆ ವಸತಿ ಗೃಹಗಳನ್ನು ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ನಮ್ಮ ತಂದೆ ಪುಟ್ಟಣ್ಣಯ್ಯ ಶಾಸಕರಾಗಿದ್ದಾಗ ಚೆಲುವನಾರಾಯಣಸ್ವಾಮಿ ದೇವಾಲಯದ ಸುತ್ತ ಕಾಂಕ್ರೀಟ್ ರಸ್ತೆ ನಿರ್ಮಿಸಲು 2 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದರು. ಆದರೆ ಐದು ವರ್ಷ ಕಳೆದರೂ ಕಾಮಗಾರಿ ಆರಂಭವಾಗಿಲ್ಲ. ತಕ್ಷಣವೇ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಸಣ್ಣ ನೀರಾವರಿ ಇಲಾಖೆಯಿಂದ 32 ಕೋಟಿ ರೂ. ವೆಚ್ಚದಲ್ಲಿ ಕಲ್ಯಾಣಿ ಮತ್ತು ಕೊಳಗಳ ಅಭಿವೃದ್ಧಿ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಇದುವರೆಗೂ ಕಾಮಗಾರಿಯೇ ಆರಂಭವಾಗಿಲ್ಲ. 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಅನ್ನದಾನ ಭವನ ಒಂದು ವರ್ಷದಿಂದ ಅನಾಥ ಕಟ್ಟಡವಾಗಿದೆ. ಪ್ರಾಚ್ಯವಸ್ತು ಇಲಾಖೆಯಿಂದ ‘ವಸಂತೋದ್ಯಾನ ಮಂಟಪ’ ನವೀಕರಣ ಕಾಮಗಾರಿಯೂ ಆರಂಭವಾಗಿಲ್ಲ. ಯೋಗಾನರಸಿಂಹಸ್ವಾಮಿ ಬೆಟ್ಟದ ಸುತ್ತ ಒತ್ತುವರಿಯಾಗಿರುವುದನ್ನು ತೆರವುಗೊಳಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಿಲ್ಲ ಎಂದು ಆರೋಪಿಸಿದರು.
ಮೇಲುಕೋಟೆ ದೇವಾಲಯದಲ್ಲಿ ಅಧಿಕಾರಿಗಳು, ಕಚೇರಿ ಸಿಬ್ಬಂದಿ ಒಂದು ಪಕ್ಷದ ಏಜಂಟರಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪ ಇದ್ದು, ದೇಗುಲದ ಇಒಗೆ ಕ್ರಮವಹಿಸಲು ಸೂಚಿಸಲಾಗಿದೆ. ಮೇಲುಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರವಾಗಿ ಉನ್ನತೀಕರಣಗೊಂಡಿದ್ದು , ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದರು.
ಮೇಲುಕೋಟೆಯಲ್ಲಿ ಕವಿ ಪುತಿನ ವ್ಯಾಸಂಗ ಮಾಡಿದ ಶತಮಾನದ ಶಾಲೆಯನ್ನು ಅಭಿವೃದ್ಧಿಗೊಳಿಸಲಾಗುವುದು. ಅಲ್ಲಿಗೆ ಮಂಜೂರಾದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಗ್ರಾಪಂ ಪಿಡಿಒಗೆ ಸೂಚಿಸಿದ್ದೇನೆ. ತಾಲೂಕಿನ ಸರ್ಕಾರಿ ಶಾಲೆಗಳ ಬಲವರ್ಧನೆಗೆ ವಿಶೇಷ ಕಾರ್ಯಯೋಜನೆ ಹಾಕಿಕೊಂಡಿದ್ದು, ಗ್ರಾಪಂ ಹಾಗೂ ಹಿರಿಯ ವಿದ್ಯಾರ್ಥಿಗಳ ಸಹಕಾರ ಪಡೆಯಲಾಗುವುದು ಎಂದರು.
ಶಾಸಕರಾಗಿ ಪ್ರಥಮ ಬಾರಿಗೆ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಆಗಮಿಸಿದ ದರ್ಶನ್ ಪುಟ್ಟಣ್ಣಯ್ಯ ಅವರನ್ನು ದೇವಾಲಯದ ಪರವಾಗಿ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್, ಸ್ಥಾನಿಕ ಶ್ರೀನಿವಾಸನರಸಿಂಹನ್ ಗುರೂಜಿ ಆತ್ಮೀಯವಾಗಿ ಬರಮಾಡಿಕೊಂಡರು. ಕಾಂಗ್ರೆಸ್ ಮುಖಂಡರಾದಕೆ.ಬಿ.ನರಸಿಂಹೇಗೌಡ, ಕನಗೋನಹಳ್ಳಿ ಪರಮೇಶ್‌ಗೌಡ, ರೈತ ಸಂಘದ ಹೊಸಕೋಟೆ ವಿಜಯಕುಮಾರ್, ನ್ಯಾಮನಹಳ್ಳಿ ಶಿವರಾಮೇಗೌಡ, ಈಶ ಮುರುಳಿ, ದೀಲೀಪ್ , ಸುಬ್ಬಣ್ಣ , ವೆಂಕಟರಾಮೇಗೌಡ , ಯೋಗನರಸಿಂಹೇಗೌಡ ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು