ಪ್ರಾದೇಶಿಕತೆಯ ಅಭಿಮಾನ ಹೆಚ್ಚಾಗಲಿ

01 NMG 01 (2)
Published on

ನಾಗಮಂಗಲ: ಸ್ವಾತಂತ್ರೃ ಲಭಿಸಿ 75 ವರ್ಷ ಕಳೆದರೂ ಇಂದಿಗೂ ನಾಡು-ನುಡಿ, ನೆಲ-ಜಲಕ್ಕಾಗಿ ಹೋರಾಡಬೇಕಿರುವುದು ನಮ್ಮೆಲ್ಲರ ದುರ್ದೈವವಾಗಿದ್ದು, ನಾಡು-ನುಡಿ ರಕ್ಷಣೆಗಾಗಿ ನೆರೆಯ ರಾಜ್ಯಗಳ ರೀತಿಯಲ್ಲಿ ನಮ್ಮಲ್ಲಿಯೂ ಪ್ರಾದೇಶಿಕತೆಯ ಅಭಿಮಾನ ಹೆಚ್ಚಾಗಬೇಕಿದೆ ಎಂದು ಶಾಸಕ ಸುರೇಶ್‌ಗೌಡ ಹೇಳಿದರು.

ಪಟ್ಟಣದ ಶ್ರೀಸೌಮ್ಯಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ಕಳೆದಿವೆ. ನಮ್ಮ ರಾಜ್ಯವಾಗಿ 67 ವರ್ಷ ಕಳೆದಿದ್ದರೂ ಇಂದಿಗೂ ನಾಡು, ನುಡಿಗಾಗಿ ನಾವು ಹೋರಾಡುತ್ತಿರುವುದು ನಮ್ಮೆಲ್ಲರ ದುರ್ದೈವವಾಗಿದೆ. ಇದನ್ನು ನೋಡಿದರೆ ನಮಗೆ ಇನ್ನೂ ಪರಿಪೂರ್ಣವಾದ ಸ್ವಾತಂತ್ರ್ಯ ಬಂದಿಲ್ಲವೆನಿಸುತ್ತಿದೆ. ಪಕ್ಕದ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣಗಳಲ್ಲಿ ಪ್ರಾದೇಶಿಕತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ತಮ್ಮ ರಾಜ್ಯವನ್ನು ರಕ್ಷಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ನಮ್ಮ ರಾಜ್ಯದಲ್ಲಿಯೂ ಪ್ರಾದೇಶಿಕತೆಯ ಒಗ್ಗಟ್ಟನ್ನು ಪ್ರದರ್ಶಿಸಬೇಕಿದೆ. ನಾಡು-ನುಡಿಯನ್ನು ರಕ್ಷಿಸಿಕೊಳ್ಳಲು ಎಲ್ಲರೂ ಒಂದಾಗಿ ನಾಡುಕಟ್ಟಲು ಶ್ರಮಿಸೋಣ ಎಂದರು.

ತಹಸೀಲ್ದಾರ್ ನಂದೀಶ್ ಮಾತನಾಡಿ, ಕನ್ನಡ ನಾಡಿನಲ್ಲಿ ಹುಟ್ಟಿರೋದು ನಮ್ಮೆಲ್ಲರ ಅದೃಷ್ಟವಾಗಿದೆ. ಈ ನಾಡನ್ನು ಕಟ್ಟಲು ಅನೇಕ ರಾಜರು ಶ್ರಮಿಸಿದ್ದು , ಅವರು ಕಟ್ಟಿಕೊಟ್ಟಿರುವ ನಾಡನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ನಮ್ಮ ಭಾಷೆ, ನಮ್ಮ ನಾಡು ಎಂಬ ಆತ್ಮಾಭಿಮಾನವನ್ನು ಮೈಗೂಡಿಸಿಕೊಂಡು ಪ್ರತಿದಿನವೂ ಕನ್ನಡದ ಹಬ್ಬವಾಗಬೇಕಿದೆ ಎಂದರು.

ಪುರಸಭೆ ಅಧ್ಯಕ್ಷೆ ಆಶಾ, ಪುರಸಭೆ ಉಪಾಧ್ಯಕ್ಷ ಜಾಫರ್‌ಷರೀಪ್, ತಾಲೂಕು ಪಂಚಾಯಿತಿ ಇಒ ಚಂದ್ರಮೌಳಿ, ಬಿಇಒ ಸುರೇಶ್, ಟಿಎಚ್‌ಒ ಡಾ.ಪ್ರಸನ್ನ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವೇಗೌಡ, ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಣ್ಣಗೌಡ, ಪುರಸಭೆ ಮುಖ್ಯಾಧಿಕಾರಿ ಅಮೃತ ಹಾಗೂ ಕನ್ನಡ ಸಂಘದ ನಟರಾಜ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net