ಪ್ರಾದೇಶಿಕ ಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣಕ್ಕಾಗಿ  ಸಂವಿಧಾನಕ್ಕೆ ತಿದ್ದುಪಡಿ ತರಲಿ

mysore
Published on

ಮೈಸೂರು: ಆಯಾ ಪ್ರಾದೇಶಿಕ ಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ನೀಡಲು ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ವಿದ್ವಾಂಸ ಡಾ.ಕೆ.ಅನಂತರಾಮು ಒತ್ತಾಯಿಸಿದರು.

ಕೃಷ್ಣಮೂರ್ತಿಪುರಂ ಶ್ರೀರಾಮಮಂದಿರದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಮೈಸೂರು ಸಾಹಿತ್ಯ ದಾಸೋಹದ 9ನೇ ವಾರ್ಷಿಕೋತ್ಸವ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದೆ ರಾಜ್ಯ ಸರ್ಕಾರವು ಈ ಕುರಿತು ಆದೇಶ ಹೊರಡಿಸಿತ್ತು. ಆದರೆ, ಖಾಸಗಿ ಶಾಲೆಗಳ ಸಂಘವು ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದರಿಂದ ಇದು ನನೆಗುದಿಗೆ ಬಿದ್ದಿದೆ. ಆದ್ದರಿಂದ ಸಂವಿಧಾನಕ್ಕೆ ತಿದ್ದುಪಡಿ ಮಾಡಿದ್ದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಆಯಾ ಪ್ರಾದೇಶಿಕ ಭಾಷೆಯಲ್ಲೇ ಕೊಡಬೇಕಾಗುತ್ತದೆ ಎಂದರು.

ಕನ್ನಡ ಸೇವೆ ನಿತ್ಯೋತ್ಸವವಾಗಬೇಕು. ಕೇವಲ ನವೆಂಬರ್‌ಗೆ ಸೀಮಿತವಾಗಬಾರದು. ಕನ್ನಡ ಸಾಹಿತ್ಯ ಪುಸ್ತಕವನ್ನು ಓದಬೇಕು. ಕನ್ನಡ ಸಾಹಿತ್ಯ ಭಂಡಾರವನ್ನು ತುಂಬಬೇಕು. ಮಹಾಭಾರತದ ಕಾಲದಿಂದಲೂ ಕನ್ನಡ ಇದೆ.

ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಕನ್ನಡದ ಎರಡು ಕಣ್ಣುಗಳಂತಿವೆ. ಭಾಷೆ-ಸಂಸ್ಕೃತಿಗೆ ನೇರ ಸಂಬಂಧ ಇದೆ. ಭಾಷೆ ಅಳಿದರೆ ಸಂಸ್ಕೃತಿಯೂ ಅಳಿಯುತ್ತದೆ. ಆದ್ದರಿಂದ ನಮ್ಮ ಭಾಷೆ, ಸಂಸ್ಕೃತಿಯ ಬಗ್ಗೆ ಪ್ರೀತಿ ಇರಬೇಕು ಎಂದರು.

ಸಾಹಿತ್ಯ ವೈವಿಧ್ಯಮಯ ರೂಪಗೊಳ್ಳಲು ಎಲ್ಲ ವೃತ್ತಿಯವರು ಸಾಹಿತ್ಯ ರಚಿಸಬೇಕು. ನವ್ಯ ಬುದ್ಧಿಜೀವಿಗಳಿಗೆ ಸೀಮಿತ. ಪ್ರಗತಿಶೀಲ ಜನರಿಂದ ದೂರ. ದಲಿತ, ಬಂಡಾಯ ಸಾಹಿತ್ಯದ ವ್ಯಾಪ್ತಿ ಸೀಮಿತ. ಹೀಗಾಗಿ ಮೈಸೂರು ಸಾಹಿತ್ಯ ದಾಸೋಹದ ಕಾರ್ಯ ಒಂದು ರೀತಿ ನವೋದಯದ ಪುನುರುತ್ಥಾನ ಇದ್ದಂತೆ ಎಂದು ಅವರು ಅಭಿಪ್ರಾಯಪಟ್ಟರು.

ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಮೈಸೂರು ದಾಸೋಹ ಸಂಸ್ಥಾಪಕ ಎಂ.ಆರ್.ಆನಂದ್, ಸಂಚಾಲಕಿ ಪದ್ಮಾ ಆನಂದ್, ಲೇಖಕ ಎಸ್.ರಾಮಪ್ರಸಾದ್ ಇನ್ನಿತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net