

ಬೀದರ್: ಪ್ರಾಥಮಿಕ ಶಿಕ್ಷಣವೇ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ. ಮಕ್ಕಳನ್ನು ಶಾಲೆಗೆ ಸೇರಿಸಿದ್ದೇವೆ, ಶಿಕ್ಷಕರು ಪಾಠ ಮಾಡುತ್ತಾರೆ ಎಂದು ಸುಮ್ಮನಿದ್ದರೆ ಸಾಲದು. ಮಗು ಏನು ಕಲಿಯುತ್ತಿದೆ ಎನ್ನುವುದನ್ನು ಪಾಲಕರು ನಿತ್ಯ ಗಮನಿಸಬೇಕು ಎಂದು ಡಯಟ್ ಪ್ರಾಂಶುಪಾಲ ಡಾ.ಮಹ್ಮದ್ ಗುಲ್ಶನ್ ಸಲಹೆ ನೀಡಿದರು.
ವಿಜ್ಞಾನ ಪರಿಷತ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಸಹಯೋಗದಡಿ ಡಯಟ್ನಲ್ಲಿ ಏರ್ಪಡಿಸಿದ್ದ ಪ್ರೌಢಶಾಲೆ ಮಕ್ಕಳ ಸರ್ ಸಿ.ವಿ.ರಾಮನ್ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸೋಲು-ಗೆಲುವು ಸಾಮಾನ್ಯ. ಆದರೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಶಿಕ್ಷಣ ಮತ್ತು ಸಾಕ್ಷರತಾ ಉಪ ನಿರ್ದೇಶಕ ಓಂಕಾರ ರೂಗನ್, ಪರಿಷತ್ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಮಹಾರುದ್ರಪ್ಪ ಆಣದೂರೆ ಮಾತನಾಡಿ, ಸ್ಪರ್ಧೆಗಳಿಂದ ಮಕ್ಕಳಲ್ಲಿ ವಿಜ್ಞಾನದ ಆಸಕ್ತಿ ಬೆಳೆಯುವುದರ ಜತೆಗೆ ಭವಿಷ್ಯದ ವಿಜ್ಞಾನಿಗಳನ್ನು ರೂಪಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಡಯಟ್ ನೋಡಲ್ ಅಕಾರಿ ದಿಗಂಬರ ಬಿ.ಕೆ., ಪರಿಷತ್ ಜಿಲ್ಲಾಧ್ಯಕ್ಷ ಸುರೇಂದ್ರನಾಥ ಹುಡುಗಿಕರ್, ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಬೆಳಕೇರೆ, ಡಿಡಿಪಿಐ ಕಚೇರಿ ವಿಜ್ಞಾನ ವಿಷಯ ಪರಿವೀಕ್ಷಕ ಗುಂಡಪ್ಪ ಹುಡುಗೆ ಮಾತನಾಡಿದರು. ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕಿ ಗೀತಾ, ಸ್ಪರ್ಧೆ ಜಿಲ್ಲಾ ಸಂಯೋಜಕ ರಾಜಕುಮಾರ ಆರ್ಯ, ಬಾಬುರಾವ ಸಳಸಾರೆ, ಶಾಂತಕುಮಾರ ಗುನ್ನಳ್ಳಿ, ಮಲ್ಲಪ್ಪ ಜಿಗಜೀವಣಿ ಇತರರಿದ್ದರು. ದೇವಿಪ್ರಸಾದ ಕಲಾಲ್ ನಿರೂಪಣೆ ಮಾಡಿದರು.
ಕರಡ್ಯಾಳ ಶ್ರೀ ಚನ್ನಬಸವೇಶ್ವರ ಗುರುಕುಲ ವಿದ್ಯಾರ್ಥಿಗಳಾದ ಸ್ನೇಹಾ ಜಯರಾಜ, ಅಶ್ವಿನಿ ವೀರಶೆಟ್ಟಿ ಪ್ರಥಮ ಹಾಗೂ ಶ್ರೀ ದತ್ತಗಿರಿ ಮಹಾರಾಜ ಪಬ್ಲಿಕ್ ಸ್ಕೂಲ್ ನ ನಿತೀನ್, ಬಿಂದುಶ್ರೀ ದ್ವಿತೀಯ ಸ್ಥಾನ ಪಡೆದರು. ಪ್ರಥಮ ಸ್ಥಾನ ಪಡೆದ ತಂಡ ಸೆಪ್ಟೆಂಬರ್ ಮೊದಲ ವಾರ ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದೆ.