

ಬೀದರ್: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಹುಮನಾಬಾದ್ ತಾಲೂಕಿನ ಘೋಡವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ರವೀಂದ್ರ ರೆಡ್ಡಿ ಪುನರಾಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿ ಸಂಘದ ಜಿಲ್ಲಾ ಘಟಕದ ಎಲ್ಲ 9 ಪದಾಧಿಕಾರಿಗಳ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.
ಜಿಲ್ಲಾ ಘಟಕಕ್ಕೆ ಆಯ್ಕೆಯಾದವರಲ್ಲಿ ಪಂಢರಿ ಅಡೆ, ನಿರ್ಮಲಾ ಚಲ್ವಾ (ಉಪಾಧ್ಯಕ್ಷರು), ಪ್ರಭುಲಿಂಗ (ಪ್ರಧಾನ ಕಾರ್ಯದರ್ಶಿ), ಅಲ್ಲಾವುದ್ದಿನ್ ಪಟೇಲ್ (ಖಜಾಂಚಿ), ಅಬ್ದುಲ್ ಸತ್ತಾರ್, ಸುಮತಿ (ಸಹ ಕಾರ್ಯದರ್ಶಿ), ಶ್ರೀರಂಗರಾವ್ ಮತ್ತು ರಾಜಮತಿ ಕೋರಾಳೆ (ಸಂಘಟನಾ ಕಾರ್ಯದರ್ಶಿ) ಸೇರಿದ್ದಾರೆ.
ಮುರುಗೇಂದ್ರ ಸಜ್ಜನ್ ಹುಮನಾಬಾದ್ ತಾಲೂಕು ಘಟಕ, ಸೂರ್ಯಕಾಂತ ಸುಂಟೆ ಭಾಲ್ಕಿ, ಜಗನ್ನಾಥ ಪತಂಗೆ ಬಸವಕಲ್ಯಾಣ, ರಾಜು ಸಾಗರ್ ಬೀದರ್, ರಾಜಕುಮಾರ ನಂದೊಡ್ಡೆ ಹುಲಸೂರ, ಗಜಾನನ ಮುರ್ಕಿ ಔರಾದ್ ಹಾಗೂ ರಾಜಪ್ಪ ಜಮಾದಾರ ಚಿಟಗುಪ್ಪ ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜಿಲ್ಲೆಯ 8 ತಾಲೂಕುಗಳಿಗೆ 105 ನಿರ್ದೇಶಕರು ಆಯ್ಕೆಯಾಗಿದ್ದಾರೆ.
ಸನ್ಮಾನ: ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದ ರವೀಂದ್ರ ರೆಡ್ಡಿ ಹಾಗೂ ಪದಾಧಿಕಾರಿಗಳನ್ನು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಂಗಳವಾರ ಸನ್ಮಾನಿಸಿ ಮಾತನಾಡಿ, ಎಲ್ಲ ಪದಾಧಿಕಾರಿಗಳ ಅವಿರೋಧ ಆಯ್ಕೆಯು ಶಿಕ್ಷಕರಲ್ಲಿನ ಒಗ್ಗಟ್ಟು ಪ್ರದರ್ಶಿಸಿದೆ. ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಸತತ ಪ್ರಯತ್ನ ಮಾಡುತ್ತಿರುವ ಕಾರಣ ರೆಡ್ಡಿ ಅವರಿಗೆ ಮತ್ತೊಮ್ಮೆ ಅವಕಾಶ ದೊರಕಿದೆ ಎಂದು ಹೇಳಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ರವೀಂದ್ರ ರೆಡ್ಡಿ, ಮೊದಲ ಅವಧಿಯಲ್ಲಿ ಪ್ರಾಥಮಿಕ ಶಿಕ್ಷಕರ ಅನೇಕ ಸಮಸ್ಯೆಗಳನ್ನು ಪರಿಹರಿಸಿದ್ದೇನೆ. ಇದೀಗ ಮತ್ತೊಂದು ಅವಧಿಗೆ ಅವಕಾಶ ನೀಡಿರುವುದು ಸಂತಸ ತಂದಿದೆ. ಶಿಕ್ಷಕರ ಹಿತರಕ್ಷಣೆಗಾಗಿ ಶಕ್ತಿ ಮೀರಿ ಶ್ರಮಿಸುವೆ ಎಂದು ಹೇಳಿದರು.
ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ರಾಜಕುಮಾರ ಹೊಸದೊಡ್ಡೆ, ಬಸವರಾಜ ಜಕ್ಕಾ, ಮನೋಹರ ಕಾಶಿ ಇದ್ದರು.