ಪ್ರಾಥಮಿಕ ಭದ್ರ, ಉನ್ನತ ಶಿಕ್ಷಣ ಅಭದ್ರ

2
Published on

ಮೈಸೂರು: ನಮ್ಮಲ್ಲಿ ಪ್ರಾಥಮಿಕ ಶಿಕ್ಷಣ ಚೆನ್ನಾಗಿದೆ. ಆದರೆ, ಉನ್ನತ ಶಿಕ್ಷಣ ಭದ್ರವಾಗಿಲ್ಲ. ಬೇರೆ ಬೇರೆ ದೇಶಗಳ ವಿಶ್ವವಿದ್ಯಾಲಯಗಳನ್ನು ಕಾಪಿ ಮಾಡಲು ಹೋಗಿ ಹೀಗೆ ಆಗಿದೆ ಎಂದು ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ವಿಷಾದಿಸಿದರು.

ಕನ್ನಡ ಜಾನಪದ ಪರಿಷತ್ ವತಿಯಿಂದ ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ಜಾನಪದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಇಂಗ್ಲಿಷ್ ಕಲಿತವರು ಶ್ರೇಷ್ಠ ಎಂಬ ಭಾವನೆ ಸರಿಯಲ್ಲ. ಕನ್ನಡವನ್ನು ನಾವು ಹೇಳಿದಂತೆ ಬರೆಯುತ್ತೇವೆ. ಹೀಗಾಗಿ ಕನ್ನಡ ಅತ್ಯಂತ ಶ್ರೀಮಂತ ಭಾಷೆ. ಇಂಗ್ಲಿಷ್ ಅನ್ನು ಫ್ರಾನ್ಸ್, ಜರ್ಮನಿಯವರು ಹತ್ತಿರ ಬಿಟ್ಟುಕೊಂಡಿಲ್ಲ. ಆದರೆ, ಭಾರತದಲ್ಲಿ ಯಾವ ಊಟ ಮಾಡಬೇಕು, ಯಾವ ಬಟ್ಟೆ ಧರಿಸಬೇಕು ಎಂಬುದನ್ನು ಅಮೆರಿಕದ ಕಂಪನಿಗಳು ನಿರ್ಧರಿಸುವಂತಾಗಿದೆ ಎಂದರು.

ಇವತ್ತು ರಾಜಕಾರಣ ಗೌರವ ತರುವ ರೀತಿಯಲ್ಲಿ ಉಳಿದಿಲ್ಲ. ಅಧಿಕಾರ, ಹಣದಿಂದ ಬರುವ ಗೌರವ ಸರಿಯಲ್ಲ. ವ್ಯಕ್ತಿತ್ವದಿಂದ ಗೌರವ ಸಿಗುವಂತಿರಬೇಕು ಎಂದರು.
ಚುನಾವಣೆಯ ಸಂದರ್ಭದಲ್ಲಿ ನಿಮ್ಮ ಸೇವೆ ಮಾಡಲು ಅವಕಾಶ ಕೊಡಿ ಎಂದು ಕೇಳುವ ರಾಜಕಾರಣಿಗಳು, ಗೆದ್ದ ನಂತರ ಅಧಿಕಾರದ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂದು ವ್ಯಂಗ್ಯವಾಡಿದರು.
ಮತ್ತೊಬ್ಬ ಸನ್ಮಾನಿತರಾದ ವಿಧಾನಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ ಮಾತನಾಡಿ, ಮಹಾತ್ಮ ಗಾಂಧಿ, ಡಾ.ಎಸ್.ರಾಧಾಕೃಷ್ಣನ್, ಸಾರ್ವಜನಿಕ ಹಾಸ್ಟೆಲ್ ಸಂಸ್ಥಾಪಕ ಟಿ.ಎಸ್.ಸುಬ್ಬಣ್ಣ ಮೊದಲಾದವರು ನಮ್ಮ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಸ್ಮರಿಸಿದರು.


ನಾವು ಸಿಐಟಿಬಿ ಅಧ್ಯಕ್ಷರಾಗಿದ್ದಾಗ ನಿರ್ಮಿಸಿದ್ದ ಕಟ್ಟಡದಲ್ಲಿ ಕುವೆಂಪುನಗರದ ಪ್ರಥಮ ದರ್ಜೆ ಕಾಲೇಜು ನಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ವಿವೇಕಾನಂದ ನಗರ, ಶಾರದಾದೇವಿನಗರ, ರಾಮಕೃಷ್ಣನಗರ, ಅರವಿಂದನಗರ ಬಡಾವಣೆಗಳ ನಿರ್ಮಾಣ ನನ್ನ ಅಧಿಕಾರಾವಧಿಯಲ್ಲಿ ಆಯಿತು. ಅದೇ ಈಗ ರಾಜ್ಯೋತ್ಸವ ಪ್ರಶಸ್ತಿ ತಂದುಕೊಟ್ಟಿದೆ ಎಂದರು.
ಪ್ರಾಂಶುಪಾಲೆ ಡಾ.ಎನ್.ರಾಗಿಣಿ, ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಕ್ಯಾತನಹಳ್ಳಿ ಎಚ್.ಪ್ರಕಾಶ್, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಬಿ.ಸುಬ್ರಹ್ಮಣ್ಯ, ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ಪಿ. ಬೆಟ್ಟೇಗೌಡ, ಕನ್ನಡ ಕ್ರಿಯಾ ವೇದಿಕೆ ಸಂಚಾಲಕಿ ಡಾ.ಆರ್.ಎಸ್.ಅಶ್ವಿನಿ ಪಾಲ್ಗೊಂಡಿದ್ದರು.


ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪಡುವಾರಹಳ್ಳಿ ಎಂ.ರಾಮಕೃಷ್ಣ, ಹೇಮಾ ನಂದೀಶ್, ವಿಕ್ರಂ ಅಯ್ಯಂಗಾರ್, ಹುಯಿಲಾಳು ರಾಮಸ್ವಾಮಿ, ಬೆಸೂರು ಮೋಹನ್ ಪಾಳೇಗಾರ್, ಜಿ.ರವಿಶಂಕರ್, ಆರ್.ನಿಂಗರಾಜು, ಸಿದ್ದರಾಮು ಅವರನ್ನು ಸನ್ಮಾನಿಸಲಾಯಿತು.


ಕಾಲೇಜಿನ ಕನ್ನಡ ಕ್ರಿಯಾ ವೇದಿಕೆ ಉದ್ಘಾಟನೆ, ವಿದ್ಯಾರ್ಥಿಗಳಿಂದ ರಾಜ್ಯೋತ್ಸವ ಕವಿಗೋಷ್ಠಿ ನಡೆಯಿತು. ಗೋಡೆ ಪತ್ರಿಕೆಯನ್ನು ಅನಾವರಣ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net