ಪ್ರಾಣಿಗಳ ರಕ್ಷಣೆಗೆ ಎಸ್‌ಪಿಸಿಎ ಸಕ್ರಿಯಗೊಳಿಸಿ: ಅನುಕಂಪ ಪ್ರಾಣಿ ದಯಾ ಸಂಘಟನೆ ಒತ್ತಾಯ

ಪ್ರಾಣಿಗಳ ರಕ್ಷಣೆಗೆ ಎಸ್‌ಪಿಸಿಎ ಸಕ್ರಿಯಗೊಳಿಸಿ: ಅನುಕಂಪ ಪ್ರಾಣಿ ದಯಾ ಸಂಘಟನೆ ಒತ್ತಾಯ
Published on

ಹಾಸನ: ಬೀದಿನಾಯಿ, ಬಿಡಾಡಿ ದನ, ಕುದುರೆ ಸೇರಿ ಮತ್ತಿತರ ಪ್ರಾಣಿಗಳ ಸಮಸ್ಯೆ ತಪ್ಪಿಸಲು ಜಿಲ್ಲಾಡಳಿತ ಎಸ್‌ಪಿಸಿಎ ಸಕ್ರಿಯಗೊಳಿಸಬೇಕು ಎಂದು ಅನುಕಂಪ (ಪ್ರಾಣಿ ದಯಾ)ಸಂಘಟನೆ ಪದಾದರಿಕಾರಿಗಳು ಒತ್ತಾಯಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಲೆನಾಡು ಜನಪರ ಹೊರಾಟ ಸಮಿತಿಯ ಅಧ್ಯಕ್ಷ ಕಿಶೋರ್ ಕುಮಾರ್ ಮಾತನಾಡಿ, ಮೂಕ ಪ್ರಾಣಿಗಳ ಗೋಳನ್ನು ಕೇಳುವವರೇ ಇಲ್ಲವಾಗಿದ್ದು, ಪ್ರಾಣಿಗಳ ಬಗ್ಗೆ ಅನುಕಂಪ ಹೊಂದಿರುವ ಕೆಲವರು ತಮ್ಮ ಸೀಮಿತ ಶಕ್ತಿಯಲ್ಲಿ ಕೈಲಾದ ಸೇವೆ ಮಾಡುತ್ತಿದ್ದಾರೆ. ಅದ್ದರಿಂದ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಎಸ್‌ಪಿಸಿಎಯನ್ನು ಸಕ್ರಿಯಗೊಳಿಸಬೇಕು. ನಗರದ ಪಶು ವೈದ್ಯಕೀಯ ಕಾಲೇಜಿನಲ್ಲಿ ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ. ಆದರೆ, ಅಲ್ಲಿ ಔಷಧಿಗಳು ಲಭ್ಯವಿಲ್ಲ. ಹಾಗಾಗಿ ಸರ್ಕಾರ ಔಷಧಿ ಪೂರೈಕೆ ಮಾಡಬೇಕು ಎಂದು ಒತ್ತಾಸಿದರು.

ಹೈಕೋರ್ಟ್ ಕಳೆದ ಮಾರ್ಚ್‌ನಲ್ಲಿ ಸುತ್ತೋಲೆ ಹೊರಡಿಸಿ ಅನಿಮಲ್ ಬರ್ತ್ ಕಂಟ್ರೋಲ್ ಆಕ್ಟ್ ಮತ್ತು ರೂಲ್ಸ್ ಪ್ರಕಾರ ಗ್ರಾಮ ಪಂಚಾಯಿತಿ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ, ನಗರಸಭೆ, ಪಟ್ಟಣ ಪಂಚಾಯಿತಿಯವರು ತಮ್ಮ ವ್ಯಾಪ್ತಿಯ ಬೀದಿನಾಯಿಗಳಿಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಬೇಕು. ಇದರ ಮೇಲ್ವಿಚಾರಣೆಯನ್ನು ಜಿಲ್ಲಾ ಪಂಚಾಯಿತಿ ಮಾಡಬೇಕು ಎಂದು ಹೇಳಿದೆ,ಆದರೆ ಇಲೀವರೆಗೂ ಯಾವುದೂ ಆಗಿಲ್ಲ ಎಂದು ದೂರಿದರು.

ಜಿಲ್ಲೆಯಲ್ಲಿ ಪ್ರಾಣಿಗಳ ಶೆಲ್ಟರ್ ಹೋಂ ನಿರ್ಮಾಣಕ್ಕೆ ತಾಲ್ಲೂಕಿನ ಶಾಂತಿಗ್ರಾಮದ ಬಳಿ 5 ಎಕರೆ ಜಾಗ ನಿಗದಿ ಮಾಡಲಾಗಿದೆ ಎಂದು ಹಿಂದಿನ ಜಿಲ್ಲಾಧಿಕಾರಿ ತಿಳಿಸಿದ್ದರು. ಆದ್ದರಿಂದ ಕೂಡಲೇ ಶೆಲ್ಟರ್ ಹೋಂ ತೆರೆಯಬೇಕು. ಈ ಬಗ್ಗೆ ಚರ್ಚಿಸಲು ಸಭೆ ಕರೆಯುವಂತೆ ಈಗಾಗಲೇ ಜಿಲ್ಲಾಧಿಕಾರಿಗೆ ಎರಡು ಬಾರಿ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಅಪರ್ಣ, ರಾಜೀವೇಗೌಡ, ಡಾ.ತೇಜಸ್ವಿ, ಶೇಷಮ್ಮ, ಶೇಷಪ್ಪ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ್ಳುಗೋಪಾಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net