

ಚಿತ್ರದುರ್ಗ: ಮೃಗಾಲಯಕ್ಕೆ ಭೇಟಿ ನೀಡಿದಾಗ ಸಂಪೂರ್ಣ ವೀಕ್ಷಣೆ ಮೂಲಕ ವನ್ಯಜೀವಿಗಳ ಬಗ್ಗೆ ಮಕ್ಕಳಲ್ಲಿ ತಿಳಿವಳಿಕೆ ಮೂಡಿಸುವಂತೆ ನಗರದ ಜೋಗಿಮಟ್ಟಿ ಆಡುಮಲ್ಲೇಶ್ವರ ಕಿರು ಮೃಗಾಲಯದ ವಲಯ ಅರಣ್ಯಾಧಿಕಾರಿ ಐ.ಬಿ. ಅಕ್ಷತಾ ಪಾಲಕರು, ಶಿಕ್ಷಕರಿಗೆ ಮನವಿ ಮಾಡಿದರು.
ಮೃಗಾಲಯದಲ್ಲಿ ಗುರುವಾರ 71ನೇ ವನ್ಯಜೀವಿ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಮೃಗಾಲಯದಲ್ಲಿರುವ ಆಟಿಕೆಗಳ ಬಳಕೆ ಜತೆಗೆ ಪ್ರಾಣಿ ಪಕ್ಷಿಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಮೃಗಾಲಯ ವೀಕ್ಷಣೆಯಿಂದ ಪ್ರಾಣಿ ಪಕ್ಷಿಗಳ ಆಹಾರ, ಜೀವನ ಶೈಲಿ ತಿಳಿಯಲು ಸಾಧ್ಯವಾಗಲಿದೆ. ಪರಿಸರ ಮಾಲಿನ್ಯ ನಿಯಂತ್ರಿಸಿ, ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ನಾಗರಿಕರು ಪ್ರಯತ್ನಿಸಬೇಕು ಎಂದು ವಿನಂತಿಸಿದರು.
ಸಪ್ತಾಹ ಉದ್ಘಾಟಿಸಿದ ಕರ್ನಾಟಕ ಸರ್ವೋದಯ ಮಂಡಳಿ ಜಿಲ್ಲಾಧ್ಯಕ್ಷ ಡಾ.ಎಚ್.ಕೆ. ಸ್ವಾಮಿ ಮಾತನಾಡಿ, ಕಾಡುಪ್ರಾಣಿಗಳ ಅಧ್ಯಯನಕ್ಕೆ ಮೃಗಾಲಯಗಳು ಸೂಕ್ತವಾಗಿವೆ. ಅಳಿವಿನ ಅಂಚಿನಲ್ಲಿರುವ ವನ್ಯಜೀವಿ ಸಂಕುಲದ ಸಂರಕ್ಷಣೆ ಎಲ್ಲರ ಕರ್ತವ್ಯವಾಗಿದೆ ಎಂದರು.
ಹಿರಿಯೂರು ಅಸ್ಸಂಶನ್ ಕನ್ನಡ ಮಾಧ್ಯಮ ಶಾಲೆಯ ಫಾದರ್ ಕನಿಕರಾಜ್ ಮಾತನಾಡಿದರು. ಎಚ್.ಎಸ್.ಪ್ರೇರಣಾ, ಎಚ್.ಎಸ್. ರಚನಾ ಪರಿಸರ ಗೀತೆಗಳನ್ನು ಹಾಡಿದರು. ಉಪ ವಲಯ ಅರಣ್ಯಾಧಿಕಾರಿ ವೆಂಕಟೇಶ ಭೀಮಣ್ಣ ಪಡೆದಳ್ಳಿ, ಗಸ್ತು ಅರಣ್ಯಪಾಲಕ ಸಂತೋಷ್ ಮಲ್ಲಾಪುರ ಇತರರು ಇದ್ದರು.