ಪ್ರಾಣಿ-ಪಕ್ಷಿಗಳ ಜೀವ ಉಳಿಸಲು ನೆರವು ಕೋರಿಕೆ

18sirsi1
Published on

ಶಿರಸಿ: ಅನಾರೋಗ್ಯಪೀಡಿತ ಪ್ರಾಣಿ, ಪಕ್ಷಿಗಳ ಪುನರ್ವಸತಿಗಾಗಿ ಇಲ್ಲಿನ ಪದ್ಮ ಸೇವಾ ಟ್ರಸ್ಟ್ ಆರಂಭಿಸಿದ್ದ ಅಮೇಜಿಂಗ್ ಪೆಟ್ ಪ್ಲಾನೆಟ್ ಇದೀಗ ನೋಡುಗರಿಲ್ಲದೆ ಸೊರಗುತ್ತಿದೆ. ಹೀಗಾಗಿ ಇಲ್ಲಿನ ಜೀವಿಗಳು ಆಹಾರಕ್ಕೂ ಪರದಾಡುವಂತಾಗಿದೆ ಎಂದು ಪ್ಲಾನೆಟ್ ಮುಖ್ಯಸ್ಥ ರಾಜೇಂದ್ರ ಶಿರಸಿಕರ ಹೇಳಿದರು.

ನಗರದ ಹೊರವಲಯದ ಶ್ರೀನಗರದಲ್ಲಿನ ಅಮೇಜಿಂಗ್ ಪ್ಲಾನೆಟ್​ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಯಗೊಂಡು ನಿತ್ರಾಣ ಸ್ಥಿತಿಯಲ್ಲಿರುವ ಪ್ರಾಣಿಗಳು, ಅನಾರೋಗ್ಯದಿಂದ ರಸ್ತೆ ಬದಿ ಬಿದ್ದ ಪ್ರಾಣಿಗಳಿಗೆ ಈ ಪ್ಲಾನೆಟ್​ನಲ್ಲಿ ಆಶ್ರಯ ನೀಡಲಾಗಿದೆ. 5 ವರ್ಷಗಳ ಪ್ರಯತ್ನದ ಫಲವಾಗಿ ಪ್ಲಾನೆಟ್ ಹಲವು ಜೀವ ವೈವಿಧ್ಯಗಳ ತಾಣವಾಗಿದೆ. ಆದರೆ, ಕರೊನಾ ಕಾರಣಕ್ಕೆ ನೋಡುಗರು ಇತ್ತ ಸುಳಿಯುತ್ತಿಲ್ಲ. ಹೀಗಾಗಿ, ಆದಾಯವಿಲ್ಲದೆ ಸಾಕು ಪ್ರಾಣಿ-ಪಕ್ಷಿಗಳ ಆಹಾರಕ್ಕೆ ಸಮಸ್ಯೆಯಾಗುತ್ತಿದೆ. ಕುದುರೆ, ಆಡು, ಗಿಳಿ, ಕೋಳಿ, ಮೊಲ ಸೇರಿದಂತೆ ಹಲವು ಜೀವಿಗಳು ಚಿಕಿತ್ಸೆ ಪಡೆಯುತ್ತಿವೆ. ಹಲವು ಪ್ರಾಣಿ ಪಕ್ಷಿಗಳನ್ನು ಹೊರ ರಾಜ್ಯ, ವಿದೇಶಗಳಿಂದಲೂ ತರಲಾಗಿದೆ. ಆಫ್ರಿಕದ ಹೆಬ್ಬಾವು, ವಿವಿಧ ಜಾತಿಯ ಹಾವುಗಳು, ವಿವಿಧ ಗಿಳಿಗಳು, ಬಾತುಕೋಳಿ, ವಿದೇಶದ ಕೋಳಿಗಳು, ನವಿಲು, ಯುರೋಪಿನ ಮುಂಗುಸಿ, ಮೊಲ, ಉಡ, ಸೈಬೀರಿಯಾದ ಮುಂಗುಸಿ ಸೇರಿದಂತೆ 50ಕ್ಕೂ ಹೆಚ್ಚು ಬಗೆಯ ಪ್ರಾಣಿ-ಪಕ್ಷಿಗಳಿವೆ. ಇವೆಲ್ಲವೂ ಆಹಾರಕ್ಕಾಗಿ ಪರದಾಡುವಂತಾಗಿದೆ. ನಿತ್ಯ 3 ಸಾವಿರ ರೂಪಾಯಿಗೂ ಅಧಿಕ ವೆಚ್ಚವಾಗುತ್ತಿದ್ದು, ದಾನಿಗಳು ಸಹಕಾರ ನೀಡುವ ಅನಿವಾರ್ಯತೆ ಇದೆ ಎಂದರು. ಸಹಕಾರ ನೀಡುವವರು ಪದ್ಮ ಸೇವಾ ಟ್ರಸ್ಟ್, ಅಕೌಂಟ್ ನಂ/ 619001010050123, ಐಎಫ್​ಎಸ್​ಸಿ ಕೋಡ್/ ಯುಬಿಐಎನ್​ಒ 561908, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (ಶಿರಸಿ)ಗೆ ಹಣ ಜಮಾ ಮಾಡಬಹುದು. ಹೆಚ್ಚಿನ ಮಾಹಿತಿಗೆ (9945797334/ 9611589606) ಸಂಪರ್ಕಿಸಬಹುದು ಎಂದರು. ಈ ವೇಳೆ ಪ್ರಮುಖರಾದ ವಿವೇಕ ರಾಯ್ಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net