

ಚಾಮರಾಜನಗರ: ವನ್ಯಜೀವಿಗಳ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ಸರ್ಕಾರ ನೀಡುವ ಪರಿಹಾರ ಧನವನ್ನು ಹೆಚ್ಚಳ ಮಾಡಿರುವುದು ಕಾಡಿನ ವಾಸಿಗಳಲ್ಲಿ ಕೊಂಚ ಮಟ್ಟಿಗೆ ಸಮಾಧಾನ ತಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 16ನೇ ಬಜೆಟ್‌ನಲ್ಲಿ ವನ್ಯಪ್ರಾಣಿಗಳ ದಾಳಿಯಿಂದ ಉಂಟಾಗುವ ಮಾನವ ಪ್ರಾಣ ಹಾನಿ ಪ್ರಕರಣಗಳಲ್ಲಿ ನೀಡಲಾಗುತ್ತಿರುವ ದಯಾತ್ಮಕ ಧನವನ್ನು 15 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ೋಷಿಸಿದ್ದಾರೆ. ಈ ಬೇಡಿಕೆಯನ್ನು ಆದಿವಾಸಿ ಬುಡಕಟ್ಟು ಸಮುದಾಯ ಹಿಂದಿನಿಂದಲೂ ಕೋರುತ್ತಲೇ ಇತ್ತು. ಮಧ್ಯಪ್ರದೇಶ ರಾಜ್ಯದಲ್ಲಿ ವನ್ಯಜೀವಿ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಮಾದರಿಯಲ್ಲಿ ಕರ್ನಾಟಕದಲ್ಲೂ ಪರಿಹಾರ ನೀಡಬೇಕೆಂದು ಬುಡಕಟ್ಟು ಸಮುದಾಯ ಒತ್ತಾಯ ಮಾಡುತ್ತಲೇ ಇತ್ತು. ಇದನ್ನು ಪೂರಕವಾಗಿ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿಯಲ್ಲಿ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಸಾರಿ ಕೇಂದ್ರದ ಬಳಿ ಅರಣ್ಯ ಇಲಾಖೆ ಕಚೇರಿ ಉದ್ಘಾಟನೆಗೆ ಸಚಿವ ಈಶ್ವರ ಖಂಡ್ರೆ ಆಗಮಿಸಿದ್ದಾಗ ಮನವಿ ಸಲ್ಲಿಕೆಯಾಗಿತ್ತು. ಬುಡಕಟ್ಟು ಸಮುದಾಯದ ಮುಖಂಡರು ಮನವಿ ಪತ್ರ ಸಲ್ಲಿಸಿ ಪರಿಹಾರ ಧನವನ್ನು ಹೆಚ್ಚಳ ಮಾಡಬೇಕೆಂದು ಕೋರಿದ್ದರು. ಅರಣ್ಯ ಸಚಿವ ಈಶ್ವರ ಖಂಡ್ರೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಹಿನ್ನೆಲೆಯಲ್ಲಿ ರಾಜ್ಯ ಬಜೆಟ್‌ನಲ್ಲಿ ಪರಿಹಾರ ಧನ ಹೆಚ್ಚಳವಾಗಿರುವುದನ್ನು ಕಾಣಬಹುದು ಎಂದು ಹೇಳಲಾಗುತ್ತಿದೆ.
ಪ್ರಾಣಿ ದಾಳಿಗೆ ಜೀವ ಬಲಿ: ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಆನೆ, ಹುಲಿ ಇನ್ನಿತರೆ ವನ್ಯಜೀವಿಗಳ ದಾಳಿಯಲ್ಲಿ ಮಾನವರು ಬಲಿಯಾಗುತ್ತಲೇ ಇದ್ದಾರೆ. ಇದು ಮಾನವ-ಪ್ರಾಣಿ ಸಂಘರ್ಷದ ಪ್ರತೀಕವಾಗಿದೆ. ಬಂಡೀಪುರ ಹುಲಿ ಕಾಡು ವ್ಯಾಪ್ತಿಯಲ್ಲಿ 2023ರ ಜೂ.1ರಿಂದ 2025ರ ೆ.13ವರೆಗೆ 8 ಜನರು ಮೃತಪಟ್ಟಿದ್ದಾರೆ. ಬಿಆರ್‌ಟಿ ಹುಲಿ ಕಾಡು, ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯಜೀವಿಧಾಮಗಳ ವ್ಯಾಪ್ತಿಯಲ್ಲಿ 2023ರ ಜು.9ರಿಂದ 2024ರ ಡಿ.14ವರೆಗೆ 14 ಜನರು ಆನೆಗಳ ದಾಳಿಗೆ ಬಲಿಯಾಗಿದ್ದಾರೆ. ಆನೆ ಜಿಲ್ಲೆಯ ಅರಣ್ಯಪ್ರದೇಶಗಳಲ್ಲಿ ಆನೆಗಳ ಸಂಖ್ಯೆ ಅಧಿಕವಿದೆ. ಇದರಲ್ಲಿ ದಾಳಿಗೆ ಬಲಿಯಾದವರ ಸಂಖ್ಯೆಯೇ ಹೆಚ್ಚಾಗಿದೆ. ಬಲಿಯಾದವರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ಪರಿಹಾರ ನೀಡಲಾಗಿದೆ. ಇಲ್ಲಿಯವರೆಗೆ 15 ಲಕ್ಷ ರೂ.ಪರಿಹಾರ ದೊರಕಿದ್ದು, ಮುಂದಿನ ದಿನಗಳಲ್ಲಿ ಅವಘಡ ಸಂಭವಿಸಿದರೆ 20 ಲಕ್ಷ ರೂ. ಪರಿಹಾರ ಸಿಗಲಿದೆ. ಆದರೆ ಇಂತಹ ದುರಂತಗಳು ಸಂಭವಿಸದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ. ಮೃತಪಟ್ಟವರಲ್ಲಿ ಕಾಡಿನ ವಾಸಿಗಳೇ ಬಹುಪಾಲು ಹೆಚ್ಚಾಗಿದ್ದಾರೆ. ಅರಣ್ಯದಲ್ಲೇ ಹುಟ್ಟಿ, ಅರಣ್ಯದೊಳಗೆ ಬೆಳೆದು ಕಾಡುಪ್ರಾಣಿಗಳೊಂದಿಗೆ ಸಹಜೀವನ ನಡೆಸುತ್ತಾರೆ. ಕೆಲವೊಮ್ಮೆ ಪ್ರಾಣಿಗಳ ದಾಳಿಗೆ ಬಲಿಯಾಗಿ ಮೃತಪಡುತ್ತಾರೆ.
ಪರಿಹಾರ ಪಡೆಯಲು ತೊಡಕುಗಳು:
ವನ್ಯಜೀವಿ ದಾಳಿಯಿಂದ ಪ್ರಾಣ ಕಳೆದುಕೊಂಡವರ ಕುಟುಂಬಸ್ಥರು ಪರಿಹಾರ ಪಡೆದುಕೊಳ್ಳಲು ತೊಡಕುಗಳನ್ನೂ ಎದುರಿಸುತ್ತಿದ್ದಾರೆ. ಅರಣ್ಯ ಹಕ್ಕು ಪತ್ರ ಪಡೆದಿರುವ ಬುಡಕಟ್ಟು ಜನರು ಕಾಡಿನಲ್ಲಿ ವಾಸ ಮಾಡುವ ಹಕ್ಕನ್ನು ಪಡೆದುಕೊಂಡಿದ್ದಾರೆ. ಆದರೆ ಕಾಡಿನೊಳಗೆ ಪ್ರಾಣಿ ದಾಳಿಯಾದರೆ ಅತಿಕ್ರಮ ಪ್ರವೇಶದ ನೆಪದಲ್ಲಿ ಪರಿಹಾರ ಧನ ಪಡೆಯುವುದಕ್ಕೆ ಕೊಕ್ಕೆ ಬೀಳುತ್ತಿದೆ. ಬುಡಕಟ್ಟು ಸಮುದಾಯ ಕಾಡಿನ ಮೂಲ ನಿವಾಸಿಗಳಾಗಿದ್ದು, ಅರಣ್ಯದಲ್ಲಿ ಓಡಾಡುವಾಗ ಪ್ರಾಣಿ ದಾಳಿ ಸಂಭವಿಸುತ್ತದೆ. ಕೆಲವು ಜೀವ ಹಾನಿ ಪ್ರಕರಣಗಳಲ್ಲಿ ಪ್ರಾಣಿ ದಾಳಿಯಾಗಿ ಆದಿವಾಸಿಗಳು ಬಲಿಯಾಗಿದ್ದಾರೆ. ಅತಿಕ್ರಮ ಪ್ರವೇಶ ಮಾಡಿರುವ ಪ್ರಕರಣಗಳಲ್ಲಿ ಪರಿಹಾರ ದೊರೆಯದೆ ಕುಟುಂಬಸ್ಥರು ಅಲೆಯುವ ಪರಿಸ್ಥಿತಿಯೂ ಇದೆ ಎಂದು ಸೋಲಿಗ ಮುಖಂಡರು ಹೇಳುತ್ತಾರೆ.
ಬೇಸಿಗೆಯಲ್ಲಿ ಸಂಕಷ್ಟ:
ಬೇಸಿಗೆಯಲ್ಲಿ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಳವಾಗುವ ಸಾಧ್ಯತೆಗಳಿವೆ. ಕಾಡಿನೊಳಗೆ ಆಹಾರ, ನೀರಿನ ಕೊರತೆಯಾಗದಂತೆ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸುತ್ತದೆ. ಹಾಗಿದ್ದರೂ ಬೇಸಿಗೆಯ ರಣಭೀಕರತೆಯಿಂದ ಅಭಾವ ಹೆಚ್ಚಾದರೆ ವನ್ಯಜೀವಿಗಳು ಕಾಡಿನಿಂದ ನಾಡಿಗೆ ಲಗ್ಗೆ ಇಡುತ್ತದೆ. ಇಂತಹ ಸಂದರ್ಭದಲ್ಲಿ ಮಾನವ-ಪ್ರಾಣಿ ಸಂಘರ್ಷ ಏರ್ಪಡಬಹುದು.
ಕಾಡುಹಂದಿ ಕಾಟಕ್ಕಿಲ್ಲ ಪರಿಹಾರ: ವನ್ಯಜೀವಿಗಳಲ್ಲಿ ಕಾಡುಹಂದಿಯೂ ಒಂದಾಗಿದೆ. ಆದರೆ ಕಾಡು ಹಂದಿ ಹಾವಳಿಯಿಂದ ಉಂಟಾಗುವ ನಷ್ಟಕ್ಕೆ ಮಾತ್ರ ಪರಿಹಾರ ದೊರೆಯುವುದಿಲ್ಲ. ಜಿಲ್ಲೆಯ ಅರಣ್ಯ ಪ್ರದೇಶಗಳ ಅಂಚಿನಲ್ಲಿರುವ ಜಮೀನುಗಳಲ್ಲಿ ಕಾಡುಹಂದಿ ಕಾಟ ಮಿತಿ ಮೀರಿದೆ. ಬೆಳೆಗಳನ್ನು ತಿಂದು ಹಾಕುವ ಕಾಡುಹಂದಿಗಳು ಕೆಲವೊಮ್ಮೆ ರೈತರ ಮೇಲೂ ದಾಳಿ ನಡೆಸಿವೆ. ಇದಕ್ಕೆ ಸರ್ಕಾರದಿಂದ ಪರಿಹಾರ ಧನ ಸಿಗುವುದಿಲ್ಲ. ಕಾಡುಹಂದಿಗಳ ಬೇಟೆಯನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಸಿಡಿಮದ್ದುಗಳನ್ನು ಆಹಾರದಲ್ಲಿ ಅಡಗಿಸಿ ಕೊಡುತ್ತಾರೆ. ಇದನ್ನು ಕಾಡುಹಂದಿ ಬದಲು ಹಸುಗಳು ತಿಂದು ಬಾಯಿ ಛಿದ್ರಗೊಂಡ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿದೆ. ಈ ಪ್ರಕರಣಗಳನ್ನು ಜಿಲ್ಲಾ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ನಾಡ ಬಾಂಬ್ ತಯಾರಿಕೆ, ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸೆರೆ ಹಿಡಿದಿದ್ದರು.
ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ವನ್ಯಜೀವಿ ದಾಳಿಯಿಂದ ಮಾನವ ಪ್ರಾಣ ಹಾನಿ ಸಂಭವಿಸಿದರೆ ನೀಡುವ ಪರಿಹಾರದ ಮೊತ್ತವನ್ನು 15 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಿ ೋಷಿಸಲಾಗಿದೆ. ಇದು ಆದೇಶ ಸರ್ಕಾರದಿಂದ ನಮಗೆ ಬರಬೇಕಿದೆ. ಕಾಡುಹಂದಿಗಳಿಂದ ಹಾನಿಯಾಗುವುದಕ್ಕೆ ಪರಿಹಾರ ದೊರೆಯುವುದಿಲ್ಲ. ಶ್ರೀಪತಿ, ನಿರ್ದೇಶಕ, ಬಿಅರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ, ಚಾಮರಾಜನಗರ ವನ್ಯಜೀವಿ ದಾಳಿಯಿಂದ ಮನುಷ್ಯ ಸತ್ತರೆ ನೀಡುವ ಪರಿಹಾರವನ್ನು ಹೆಚ್ಚಳ ಮಾಡಬೇಕೆಂದು ಈ ಈ ಹಿಂದಿನಿಂದಲೂ ಕೋರುತ್ತಿದ್ದೇವು. ರಾಜ್ಯ ಬಜೆಟ್‌ನಲ್ಲಿ ಪರಿಹಾರ ಧನ ಹೆಚ್ಚಳ ಮಾಡಿರುವುದು ಸಂತೋಷದ ವಿಚಾರ. ಕೆಲವೊಂದು ಪ್ರಕರಣಗಳಲ್ಲಿ ಅತಿಕ್ರಮ ಪ್ರವೇಶದ ನಿಯಮ ಕಾಡಿನ ಮೂಲ ನಿವಾಸಿಗಳಾದ ಬುಡಕಟ್ಟು ಜನರಿಗೆ ಪರಿಹಾರ ಪಡೆದುಕೊಳ್ಳಲು ತೊಡಕನ್ನುಂಟು ಮಾಡುತ್ತಿದೆ. ಡಾ.ಸಿ.ಮಾದೇಗೌಡ, ಕಾರ್ಯದರ್ಶಿ, ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘ, ಚಾಮರಾಜನಗರ