

ಕುಮಟಾ: ತಾಲೂಕಿನಲ್ಲಿ ಕಳೆದ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿಯಲ್ಲಿ ಜೀವದ ಹಂಗು ತೊರೆದು ಜನರ ಪ್ರಾಣ ರಕ್ಷಿಸಿದ ದೋಣಿ ನಡೆಸುವವರಿಗೆ ಗೌರವಧನ ಕೊಡದಿರಲು ಕಾರಣವೇನು ಎಂದು ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ ನಾಯ್ಕ ಪ್ರಶ್ನಿಸಿದರು.
ತಾಪಂ ಸಭಾಭವನದಲ್ಲಿ ಗುರುವಾರ ನಡೆದ ತಾಪಂ ಮಾಸಿಕ ಸಭೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದರು.
ದೋಣಿ ನಡೆಸುವವರಿಗೆ ಗೌರವಧನ ಕೊಡದಿರುವುದು ಮುಂದಿನ ವರ್ಷಗಳಲ್ಲಿ ಪ್ರವಾಹ ಕಾಲದಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡಬಹುದು, ಪ್ರವಾಹಕ್ಕೆ ಎದುರಾಗಿ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲು ದೋಣಿ ಸಹಕಾರ ನೀಡದೇ ಹೋದರೆ ಏನು ಮಾಡಬೇಕು ಎಂದರು.
ಪ್ರಕೃತಿ ವಿಕೋಪದಡಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಜನ ಆಸ್ತಿಪಾಸ್ತಿ, ಮನೆ ಕಳೆದುಕೊಂಡಿದ್ದರು. ಆದರೆ, ತಾಲೂಕಿನ ಮಿರ್ಜಾನ, ಬರ್ಗಿ, ಐಗಳಕೂರ್ವೆ, ಚಿತ್ರಕುರ್ವೆ, ಕೊಡ್ಕಣಿ ಸೇರಿದಂತೆ ವಿವಿಧ ಭಾಗಗಳ ನಿವಾಸಿಗಳಿಗೆ ಪರಿಹಾರದ ಮೊತ್ತ ಇದುವರೆಗೂ ಜಮಾ ಆಗಿಲ್ಲ. ಇದಕ್ಕೇನು ಕಾರಣ ಎಂದು ಕಂದಾಯ ಅಧಿಕಾರಿಗಳನ್ನು ಪ್ರಶ್ನಿಸಿದರು.
ಕಂದಾಯ ಇಲಾಖೆಯ ಅಧಿಕಾರಿ ಕಟ್ಟಿಮನಿ ಪ್ರತಿಕ್ರಿಯಿಸಿ, ಪ್ರಕೃತಿ ವಿಕೋಪ ಪರಿಹಾರ ಹಾಗೂ ದೋಣಿಗಾರರ ಗೌರವಧನ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಸೂಕ್ತ ದಾಖಲಾತಿಗಳ ಕೊರತೆಯಿಂದ ಸಂತ್ರಸ್ತರಿಗೆ ಪರಿಹಾರ ಪಾವತಿಯಾಗದ ಸಂದರ್ಭಗಳಿವೆ ಎಂದು ಉತ್ತರಿಸಿದರು.
ಇದಕ್ಕೆ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ ಜಗನ್ನಾಥ ನಾಯ್ಕ ಹಾಗೂ ರಾಜೇಶ ನಾಯಕ, ಮೀನುಗಾರರಿಗೆ ಕೂಡಲೇ ಗೌರವಧನ ಪಾವತಿಸದಿದ್ದರೆ, ಡಬ್ಬಿ ಹಿಡಿದುಕೊಂಡು ತಹಸೀಲ್ದಾರ್ ಕಚೇರಿಯಲ್ಲಿ ಭಿಕ್ಷೆ ಎತ್ತುತ್ತೇವೆ ಎಂದರು.
ಅಧ್ಯಕ್ಷೆ ವಿಜಯಾ ಪಟಗಾರ ಮಾತನಾಡಿ, ತಾಲೂಕಿನ ಸಾಕಷ್ಟು ಸಾರ್ವಜನಿಕರು ಕಂದಾಯ ಇಲಾಖೆಯ ಕಾರ್ಯವೈಖರಿಯ ಬಗ್ಗೆ ದೂರು ನೀಡಿದ್ದಾರೆ. ಬೇಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ಪತ್ರ ಬರೆಯುತ್ತೇನೆ ಎಂದರು.
ಉಪಾಧ್ಯಕ್ಷೆ ಗೀತಾ ಮುಕ್ರಿ, ಸದಸ್ಯರಾದ ಯಶೋದಾ ಶೆಟ್ಟಿ, ಅನಸೂಯಾ ಅಂಬಿಗ, ಪಾರ್ವತಿ ಗೌಡ ಇನ್ನಿತರರು ಇದ್ದರು.
ಮಧ್ಯವರ್ತಿಗಳ ಹಾವಳಿ: ಜಗನ್ನಾಥ ನಾಯ್ಕ ಮಾತನಾಡಿ, ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಕಂದಾಯ ಇಲಾಖೆಯಲ್ಲಿ ಜನರ ಸುಲಿಗೆಯಾಗುತ್ತಿದೆ. ಜನಸಾಮಾನ್ಯರ ಅಗತ್ಯ ದಾಖಲೆ ಪತ್ರಗಳನ್ನು ಕಾಣೆ ಮಾಡುತ್ತಿದ್ದಾರೆ. ಹಣ ನೀಡಿದರೆ, ವಾಪಸ್ಸು ನೀಡುತ್ತಿದ್ದಾರೆ ಎಂಬ ಆರೋಪಗಳು ಹೆಚ್ಚುತ್ತಿವೆ ಎಂದು ಸಭೆಯ ಗಮನಸೆಳೆದರು. ಪಿಂಚಣಿ ಯೋಜನೆಗಳಲ್ಲೂ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದ್ದು ಅಧಿಕಾರಿಗಳು ಅರ್ಜಿದಾರರ ನಿವಾಸಕ್ಕೆ ಭೇಟಿ ನೀಡದೇ, ಕಚೇರಿಯಲ್ಲಿ ಕುಳಿತುಕೊಂಡು, ವಾರ್ಷಿಕ ಆದಾಯವನ್ನು ನಮೂದಿಸುತ್ತಿದ್ದಾರೆ ಎಂದು ಆರೋಪಿಸಿದರು. ಒಟ್ಟಾರೆ ಕಂದಾಯ ಇಲಾಖೆಯ ಕಾರ್ಯವೃಖರಿ ಬಗ್ಗೆ ಇತರ ಸದಸ್ಯರಿಂದಲೂ ಸಾಕಷ್ಟು ಅಸಮಾಧಾನದ ಮಾತುಗಳು ಕೇಳಿಬಂತು.
ಒಂದು ಹಚ್ಚೆ ಅಂಗಡಿಗೆ ಅನುಮತಿ: ಮಹೇಶ ಶೆಟ್ಟಿ ಮಾತನಾಡಿ, ಗೋಕರ್ಣದಲ್ಲಿ 2 ತಿಂಗಳ ಹಿಂದೆ ಬಂದ್ ಮಾಡಿಸಲಾದ ಹಚ್ಚೆ ಹಾಕುವ ಅಂಗಡಿಗಳು ಪುನಃ ತಲೆ ಎತ್ತುತ್ತಿವೆ ಯಾಕೆ? ಎಂದು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಆರೋಗ್ಯಾಕಾರಿ ಡಾ. ಆಜ್ಞಾ ನಾಯಕ, ಗೋಕರ್ಣದ ಒಟ್ಟು 8 ಹಚ್ಚೆ ಅಂಗಡಿಗಳಲ್ಲಿ ಒಂದಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಉಳಿದ 7 ಅನಧಿಕೃತ ಅಂಗಡಿಗಳನ್ನು ಬಂದ್ ಮಾಡಿಸುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದರು. ತಾಲೂಕಿನಲ್ಲಿ 10 ಇಲಿ ಜ್ವರ ಪ್ರಕರಣಗಳು ಪತ್ತೆಯಾಗಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.