ಪ್ರಾಚ್ಯವಿದ್ಯಾ ಸಂಶೋಧನಾಲಯದ 133ನೇ ಸಂಸ್ಥಾಪನಾ ದಿನಾಚರಣೆ

mysore
Published on

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯವು ಜ್ಞಾನ ಪ್ರಸಾರ ಮಾಡುತ್ತಿರುವ ಹೆಮ್ಮೆಯ ಸಂಸ್ಥೆಯಾಗಿದೆ ಎಂದು ಮೈವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.

ಮೈವಿವಿ ಪ್ರಾಚ್ಯವಿದ್ಯಾ ಸಂಶೋಧನಾಲಯದ 133ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸತ್ಯಾ-ಭದ್ರ ’ ಕೃತಿ ಸಮೀಕ್ಷಾ ರಾಷ್ಟ್ರಮಟ್ಟದ ವಿಚಾರಸಂಕಿರಣ, ‘ಅಲಂಕಾರ ಸುಧಾನಿಧಿ’ ಗ್ರಂಥ ಹಾಗೂ ಸಂಶೋಧನಾಲಯದ ನೂತನ ವೆಬ್‌ಸೈಟ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

1891ರಲ್ಲಿ 10ನೇ ಚಾಮರಾಜ ಒಡೆಯರ್ ಸ್ಥಾಪಿಸಿದ ಪ್ರಾಚ್ಯವಿದ್ಯಾ ಸಂಶೋಧನಾಲಯವು ಮೈಸೂರು ವಿಶ್ವವಿದ್ಯಾನಿಲಯಕ್ಕಿಂತಲೂ ಪುರಾತನ ಸಂಸ್ಥೆ ಎಂಬುದೇ ಹಿರಿಮೆ. ಇದೀಗ 133ನೇ ಸಂಸ್ಥಾಪನಾ ದಿನವನ್ನು ಸಂಸ್ಥೆ ಆಚರಿಸಿಕೊಳ್ಳುತ್ತಿರುವುದು ನಾಡಿಗೆ ಹೆಮ್ಮೆ ಎಂದರು.

ಹೆಮ್ಮೆಯ ಸಂಕೇತ: ಯದುಗಿರಿ ಯತಿರಾಜ ಮಠದ ಪೀಠಾಧಿಪತಿ ಶ್ರೀ ನಾರಾಯಣ ರಾಮಾನುಜ ಜೀಯರ್ ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಪ್ರಥಮ ದೊರೆಗಳಾದ ಹಕ್ಕ-ಬುಕ್ಕ ಹಾಗೂ ಶ್ರೇಷ್ಠ ಕವಿ ಹರಿಹರನ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದ ಶ್ರೇಷ್ಠ ಕೃತಿಕಾರರು ಸಾಯಣಾಚಾರ್ಯರು. ಅಲಂಕಾರ ಶಾಸ್ತ್ರಕ್ಕೆ ಸಂಬಂಧಪಟ್ಟ ಅವರ ಅಲಂಕಾರ ಸುಧಾನಿಧಿ ಗ್ರಂಥದ ಮೂಲ ಪ್ರತಿ ಪ್ರಾಚ್ಯವಿದ್ಯಾ ಸಂಶೋಧನಾಲಯದ ಸಂಗ್ರಹದಲ್ಲಿರುವುದು ಹೆಮ್ಮೆಯ ಸಂಕೇತ ಎಂದರು. ಇದನ್ನು ಈಗ ಅಚ್ಚುಕಟ್ಟಾಗಿ ಮುದ್ರಣ ಮಾಡಿ ಹೊರತಂದಿರುವುದು ಮಾದರಿ ಕಾರ್ಯ ಎಂದು ಹೇಳಿದರು.

ಜಿಜ್ಞಾಸುಗಳು ಪ್ರಪಂಚದ ಯಾವುದೇ ಭಾಗದಲ್ಲಿದ್ದರೂ ಅಲ್ಲಿಂದಲೇ ಅಂತರ್ಜಾಲದ ಮಾಧ್ಯಮದ ಮೂಲಕ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿರುವ ಯಾವುದೇ ಪುಸ್ತಕವನ್ನು ಪರಾಮರ್ಶಿಸಲು ಸಾಧ್ಯವಾಗುವಂತೆ ವೆಬ್‌ಸೈಟ್ ಅನ್ನು ಡಿಸೈನ್ ಮಾಡಿರುವುದು ಶ್ಲಾಘನೀಯ. ಇದರಿಂದ ಜ್ಞಾನದ ಲಾಭವನ್ನು ಪಡೆದಲ್ಲಿ ಸಂಸ್ಥೆಯ ಶ್ರಮ ಸಾರ್ಥಕವಾಗಲಿದೆ ಎಂದರು

ಶತಾವಧಾನಿ ಡಾ.ರಾ.ಗಣೇಶ್, ಮೈವಿವಿ ಕುಲಸಚಿವೆ ವಿ.ಆರ್.ಶೈಲಜಾ, ಹಣಕಾಸು ಅಧಿಕಾರಿ ಕೆ.ಎಸ್.ರೇಖಾ, ಸಂಶೋಧನಾಲಯದ ನಿರ್ದೇಶಕ ಡಾ.ಡಿ.ಪಿ.ಮಧುಸೂದನಾಚಾರ್ಯ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net