ಪ್ರಾಚ್ಯವಸ್ತುಗಳ ಸಂಗ್ರಹಾಲಯಗಳ ಪಾತ್ರ ಅನನ್ಯ

SRP_18-02jpj
Published on

ಶ್ರೀರಂಗಪಟ್ಟಣ: ನಮ್ಮ ನೆಲ, ನಾಡನ್ನು ಕಟ್ಟಿ ಆಳ್ವಿಕೆ ನಡೆಸಿದ ರಾಜ-ಮಹಾರಾಜರ ಐತಿಹ್ಯ ತಿಳಿಯುವುದರಿಂದ ಹೆಮ್ಮೆ ಮೂಡುತ್ತದೆ ಎಂದು ಪ್ರಾಚ್ಯವಸ್ತು ಸಂಗ್ರಹಾಲಯದ ನಿವೃತ್ತ ಹಿರಿಯ ಮೇಲ್ವಿಚಾರಕ ಎಸ್.ವಿರೂಪಾಕ್ಷ ತಿಳಿಸಿದರು.
ಪಟ್ಟಣದ ದರಿಯಾದೌಲತ್‌ನ ಟಿಪ್ಪು ಸುಲ್ತಾನ್ ವಸ್ತು ಸಂಗ್ರಹಾಲಯದಲ್ಲಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವು, ನಮ್ಮ ನೆಲದ ಆಡಳಿತದ ಮೂಲ, ಭಾಷೆ ಮತ್ತು ಲಿಪಿಗಳ ಮೂಲದ ಬಗ್ಗೆ ಅನ್ವೇಷಣೆ ನಡೆಸಿ ಸಿಕ್ಕಂತಹ ಕುರುಹುಗಳನ್ನು ಸಂರಕ್ಷಿಸುವಲ್ಲಿ ಸಂಗ್ರಹಾಲಯಗಳ ಪಾತ್ರ ಮಹತ್ವಪೂರ್ಣ ಎಂದು ಬಣ್ಣಿಸಿದರು.
ರಾಜ್ಯ ಪುರಾತತ್ವ ಶಾಸ್ತ್ರಜ್ಞ ಗೌಡ ಮಾತನಾಡಿ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಶಾಸನಗಳ ನಿಜ ಚಿತ್ರಣದ ಬಗ್ಗೆ ಅರಿವು ಮೂಡಿಸುವ ಜತೆಗೆ ಅವುಗಳ ಚಿತ್ರಗಳ ಬಗ್ಗೆ ಜಾಗೃತಿ ಮೂಡಿಸಲು ಈ ವಸ್ತುಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮಕ್ಕಳಿಗೆ ಸ್ಪರ್ಧೆ: ಇದೇ ವೇಳೆ ಶಾಲಾ ವಿದ್ಯಾರ್ಥಿಗಳಿಗೆ ಉದ್ಯಾವನದಲ್ಲಿ ‘ವಸ್ತು ಸಂಗ್ರಹಾಲಯ’ ಕುರಿತು ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತ ಮೂವರು ವಿದ್ಯಾರ್ಥಿಗಳಿಗೆ ವಿಶೇಷ ಉಡುಗೊರೆ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ವೀಕ್ಷಣೆ: ಪಟ್ಟಣದ ಕೃಷ್ಣರಾಜೇಂದ್ರ ವಸ್ತು ಸಂಗ್ರಹಾಲಯದಲ್ಲಿ ಅಶೋಕನ ಶಾಸನ, ಕೃಷ್ಣದೇವರಾಯನ ಶಾಸನ, ಪುಲಿಕೇಶಿ, ಶಾತವಾಹನರ ಹಲ್ಮಿಡಿ ಶಾಸನ ಸೇರಿದಂತೆ ಕನ್ನಡದ ವಿಶೇಷ ಶಾಸನಗಳ ದೃಶ್ಯ ಚಿತ್ರಣವನ್ನು ಪ್ರದರ್ಶಿಸಲಾಗಿದ್ದು, ವಿವಿಧ ಶಾಲೆ- ಕಾಲೇಜು ವಿದ್ಯಾರ್ಥಿಗಳು ವೀಕ್ಷಿಸಿದರು.
ಟಿಪ್ಪು ಸುಲ್ತಾನ್ ವಸ್ತು ಸಂಗ್ರಹಾಲಯದ ಸಹಾಯಕ ಆಧೀಕ್ಷಕ ಪುರಾತತ್ವಜ್ಞ ಶ್ರೀಗುರು ಭಾಗಿ, ಪ್ರಾಚ್ಯವಸ್ತು ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ ಸುನೀಲ್ ಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net