ಪ್ರಾಚೀನ ಮಠಗಳ ಸ್ವಾಯತ್ತತೆಗೆ ಗೌರವ ಸಿಗಲಿ

27-KGL-3
Published on

ಕೊಳ್ಳೇಗಾಲ: ಶ್ರೀ ಮಂಟೇಸ್ವಾಮಿ, ರಾಚಪ್ಪಾಜಿ ಮತ್ತು ಸಿದ್ದಪ್ಪಾಜಿ ಕ್ಷೇತ್ರಕ್ಕೆ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಸಂಬಂಧ ಸರ್ಕಾರ ನಿರ್ಧಾರ ಮಾಡಿದ್ದು, ಧರೆಗೆ ದೊಡ್ಡವರ ಸಂಸ್ಥಾನ ಮಠದ ರಾಜ ಬೊಪ್ಪೇಗೌಡನಪುರದ ಪೀಠಾಧಿಪತಿ ಬಿ.ಎಸ್.ಜ್ಞಾನಾನಂದ ಚನ್ನರಾಜೇ ಅರಸ್ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿದ್ದಾರೆ.

ಮಂಟೇಸ್ವಾಮಿ ಗುರು-ಶಿಷ್ಯ ಪರಂಪರೆ 12ನೇ ಶತಮಾನದಿಂದಲೂ ಇದೆ. ಶತಮಾನದಷ್ಟು ಇತಿಹಾಸವಿರುವ ಈ ಪರಂಪರೆಗೆ ಮುಖ್ಯವಾಗಿ 2 ಗುರುಪೀಠಗಳಿವೆ. ಮೂಲ ಗುರುಪೀಠ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ರಾಜಬೊಪ್ಪೇಗೌಡನಪುರ ಗ್ರಾಮದಲ್ಲಿರುವ ಶ್ರೀಧರೆಗೆ ದೊಡ್ಡವರ ಸಂಸ್ಥಾನ ಮಠ ಹಾಗೂ ಸಮ ಪೀಠವಾದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಳವಳ್ಳಿ ಮಠ ಹಾಗೂ ಆದಿಹೊನ್ನಾಯಕನಹಳ್ಳಿ ಕ್ಷೇತ್ರವಾಗಿದೆ. ಗುರುಪೀಠ ಸ್ಥಾಪನೆ ನಂತರ ಮಂಟೇಸ್ವಾಮಿಯವರ ಆದೇಶದಂತೆ ರಾಚಪ್ಪಾಜಿ ಅವರಿಗೆ ಕ್ಷೇತ್ರ ಕಪ್ಪಡಿ, ಸಿದ್ದಪ್ಪಾಜಿ ಅವರಿಗೆ ಚಿಕ್ಕಲೂರು ಕ್ಷೇತ್ರ, ಲಿಂಗಯ್ಯ-ಚೆನ್ನಯ್ಯ ಅವರಿಗೆ ಕುರುಬನಕಟ್ಟೆ ಕ್ಷೇತ್ರ ಮತ್ತು ರಾಚಪ್ಪಾಜಿ ಅವರ ಧರ್ಮಪತ್ನಿ ದೊಡ್ಡಮ್ಮತಾಯಿಗೆ ಮುಟ್ಟಿನಹಳ್ಳಿ ಹಾಗೂ ರಾಜಬೊಪ್ಪಗೌಡನಪುರದಲ್ಲಿ ಪೀಠಗಳಿವೆ.

ಈ ಕ್ಷೇತ್ರಗಳ ಪರಂಪರೆ ತಲತಲಾಂತರಗಳಿಂದ ಇದೆ. ಹಲಾವರು ವರ್ಷಗಳಿಂದ ಶ್ರೀ ಧರೆಗೆ ದೊಡ್ಡವರ ಸಂಸ್ಥಾನ ಮಠ ವತಿಯಿಂದ ನೀಲಗಾರರ ಮೇಳ, ನಿತ್ಯ ಅನ್ನದಾಸೋಹ ಮತ್ತು ಜಾತ್ರಾ ಮಹೋತ್ಸವಗಳನ್ನು ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ. ಹಾಗಾಗಿ ರಾಜ್ಯ ಸರ್ಕಾರ ಅಭಿವೃದ್ಧಿ ಪ್ರಾಧಿಕಾರ ರಚನೆಯ ಪ್ರಸ್ತಾವನೆಯನ್ನು ಈ ಕೂಡಲೇ ಹಿಂದಕ್ಕೆ ಪಡೆಯಬೇಕು. ಆ ಮೂಲಕ ಪ್ರಾಚೀನ ಧಾರ್ಮಿಕ ಮಠಗಳು ಮತ್ತು ಸಂಸ್ಥೆಗಳ ಸ್ವಾಯತ್ತತೆಯನ್ನು ಗೌರವಿಸಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net