

ಹರಪನಹಳ್ಳಿ: ಪ್ರಾಚಾರ್ಯರು ಮಾಡಿದ ಎಡವಟ್ಟಿನಿಂದಾಗಿ ಎಚ್‌ಪಿಎಸ್ ಕಾಲೇಜಿನ ದ್ವಿತೀಯ ಪಿಯುಸಿಯ 39 ವಿದ್ಯಾರ್ಥಿಗಳು ಗುರುವಾರ ಪರೀಕ್ಷೆ ಬರೆಯುವುದರಿಂದ ವಂಚಿತರಾದರು. ಬೆಳಗ್ಗೆ 10.15ಕ್ಕೆ ಪರೀಕ್ಷೆ ಬರೆಯಲು ಎಲ್ಲರಂತೆ ಈ 39 ವಿದ್ಯಾರ್ಥಿಗಳು ಹಾಲ್‌ಟಿಕೆಟ್‌ನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದಾರೆ. ಆದರೆ, ಇವರ ಹಾಲ್‌ಟಿಕೆಟ್ ಸಂಖ್ಯೆಗೆ ಅನುಗುಣವಾಗಿ ಒಎಂಆರ್ ಶೀಟ್ ಬಂದಿಲ್ಲ. ಈ ಕಾರಣ ನೋಡಲ್ ಅಧಿಕಾರಿಗಳು ಇವರೆಲ್ಲರನ್ನೂ ಹಿಂದಕ್ಕೆ ಕಳಿಸಿದ್ದಾರೆ. ಇದರಿಂದ ಅವಾಕ್ಕಾದ ವಿದ್ಯಾರ್ಥಿಗಳು ಪಾಲಕರನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದು ತಮಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಇವರಿಗೆ ತಾಪಂ ಮಾಜಿ ಉಪಾಧ್ಯಕ್ಷ ಮಂಜ್ಯನಾಯ್ಕ, ವಿವಿಧ ಸಂಘಟನೆಗಳ ಮುಖಂಡರಾದ ಸಂದೇರ ಪರಶುರಾಮ, ಲಿಂಬ್ಯಾನಾಯ್ಕ, ಸುಜಾತಾ, ರೂಪಾ, ದೀಪಾ, ದರ್ಶನ, ಭೋವಿ ಸುದೀಪ, ಸುರೇಶ, ಚೇತನ, ಎಸ್.ಮಲ್ಲೇಶನಾಯ್ಕ, ವಿಷ್ಣು, ಸಾಧಿಕ್, ನವೀನಕುಮಾರ ಬೆಂಬಲಕ್ಕೆ ನಿಂತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಡಾ.ಶಿವಕುಮಾರ ಬಿರಾದಾರ್, ಎಚ್‌ಪಿಎಸ್ ಕಾಲೇಜು ಪ್ರಾಚಾರ್ಯ ಮಂಜುನಾಥ ಬಿ., ಪಿಎಸ್‌ಐ ಶಾಂತಮೂರ್ತಿ ಚರ್ಚಿಸಿ, ನಂತರ ಡಿಡಿಪಿಯು ಸುಗೇಂದ್ರ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ಘಟನೆಯ ವರದಿಯನ್ನು ಡಿಡಿಪಿಯು ಕೇಳಿದ್ದಾರೆ. ಹರಪನಹಳ್ಳಿಯ ಎಚ್‌ಪಿಎಸ್ ಪಿಯು ಕಾಲೇಜಿನ ಪ್ರಾಚಾರ್ಯ ಬಹಳ ದೊಡ್ಡ ತಪ್ಪು ಮಾಡಿದ್ದಾರೆ. ಅಗತ್ಯ ಹಾಜರಾತಿ ಇಲ್ಲದಿದ್ದರೆ ಹಾಲ್‌ಟಿಕೆಟ್ ಕೊಡಬಾರದಿತ್ತು. ಈಗ ಏನೂ ಮಾಡಲು ಬರುವುದಿಲ್ಲ. ಈ ವಿದ್ಯಾರ್ಥಿಗಳು ಮುಂದಿನ ವರ್ಷದವರೆಗೂ ಕಾಯಬೇಕು ಎಂದ ಡಿಸಿಪಿಯು ಸುಗೇಂದ್ರ ತಿಳಿಸಿದ್ದಾರೆ. ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿರುವ ಎಚ್‌ಪಿಎಸ್ ಪಿಯು ಕಾಲೇಜು ಪ್ರಾಚಾರ್ಯ ಮಂಜುನಾಥ ಬಿ., ಪರೀಕ್ಷೆಯಿಂದ ಹೊರಗುಳಿದಿರುವ 39 ವಿದ್ಯಾರ್ಥಿಗಳ ಹಾಜರಾತಿ ಅಗತ್ಯಕ್ಕೆ ತಕ್ಕಷ್ಟಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ತಿಳಿಸಲಾಗಿತ್ತು. ಪಾಲಕರು, ಕೆಲ ಸಂಘಟನೆಗಳ ಒತ್ತಡಕ್ಕೆ ಮಣಿದು ಹಾಲ್‌ಟಿಕೆಟ್ ನೀಡಲಾಗಿತ್ತು. ಪಿಯು ಬೋರ್ಡ್‌ನಿಂದ ಬಂದಿರುವ ಒಎಂಆರ್ ಶೀಟ್‌ನಲ್ಲಿ ಇವರ‌್ಯಾರ ಹೆಸರೂ ಇಲ್ಲ. ಆದ್ದರಿಂದ ಇವರು ಪರೀಕ್ಷೆಯಿಂದ ಹೊರಗುಳಿಯಬೇಕಾಯಿತು. ಇವರು ಮರು ದಾಖಲಾತಿ ಪಡೆದು, ಮುಂದಿನ ಪರೀಕ್ಷೆ ಬರೆಯುವುದೊಂದೇ ದಾರಿ ಉಳಿದಿದೆ ಎಂದು ತಿಳಿಸಿದ್ದಾರೆ.