

ರಾಯಚೂರು: ಖಾಸಗಿ ಲೇಔಟ್‌ಗಳಿಗೆ ಪರವಾನಗಿ ನೀಡಲು ಮಾತ್ರ ನಗರಾಭಿವೃದ್ಧಿ ಪ್ರಾಕಾರವಿಲ್ಲ. ಪ್ರಾಕಾರದಿಂದ ಲೇಔಟ್‌ಗಳನ್ನು ನಿರ್ಮಾಣ ಮಾಡುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ತಿಳಿಸಿದರು.
ಸ್ಥಳೀಯ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಜರುಗಿದ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಖಾಸಗಿ ಲೇಔಟ್‌ಗಳಿಗೆ ತಾತ್ಕಾಲಿಕವಾಗಿ ಹೊಸ ಅನುಮತಿ ನೀಡುವುದನ್ನು ನಿಲ್ಲಿಸಿ, ಪ್ರಾಕಾರದಿಂದಲೇ ಲೇಔಟ್ ನಿರ್ಮಾಣ ಮಾಡಿ, ಜನರಿಗೆ ನಿವೇಶನಗಳನ್ನು ಒದಗಿಸಬೇಕು ಎಂದರು.
ಲೇಔಟ್ ನಿರ್ಮಾಣಕ್ಕೆ ನಗರದ ಮುತ್ತಮುತ್ತಲ ಲೇಔಟ್ ನಿರ್ಮಾಣಕ್ಕೆ ಸ್ಥಳವನ್ನು ಗುರುತಿಸಿ ಜನರಿಗೆ ಕಡಿಮೆ ಬೆಲೆಯಲ್ಲಿ ನಿವೇಶನ ನೀಡಲು ಅಕಾರಿಗಳು ಕ್ರಮಕೈಗೊಳ್ಳಬೇಕು.
ನಗರಾಭಿವೃದ್ಧಿ ಪ್ರಾಕಾರದಿಂದ ನಿರ್ಮಾಣ ಮಾಡುವ ಸ್ವಾಗತ ಕಮಾನು, ಉದ್ಯಾನವನ, ವಿದ್ಯುತ್ ಕಂಬ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ಮಾಡಬೇಕು. ಲೇಔಟ್‌ಗಳಲ್ಲಿ ಕಡ್ಡಾಯವಾಗಿ ಮೂಲ ಸೌಕರ್ಯ ಕಲ್ಪಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು.
ನಗರದಲ್ಲಿನ ಐತಿಹಾಸಿಕ ಮಾವಿನಕೆರೆ ಅಭಿವೃದ್ಧಿ ಕುರಿತು ಪ್ರಸ್ತಾವನೆ ಸಲ್ಲಿಸಬೇಕು. ಕೆರೆ ಅಭಿವೃದ್ಧಿಯನ್ನು ಉತ್ತಮ ಗುಣಮಟ್ಟದಿಂದ ಪೂರ್ಣಗೊಳಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು. ಕೆರೆ ಒತ್ತುವರಿಯಾಗಿದ್ದಲ್ಲಿ ಮರು ಸರ್ವೇ ನಡೆಸಿ ಒತ್ತುವರಿ ತೆರವಿಗೆ ಅಗತ್ಯ ಕ್ರಮಕೈಗೊಳ್ಳಬೇಕು.
ನಗರದಲ್ಲಿನ ರಸ್ತೆಗಳು ಹದಗೆಟ್ಟಿರುವ ಬಗ್ಗೆ ದೂರುಗಳು ಬರುತ್ತಿದ್ದು, ಪ್ರಾಕಾರದ ವ್ಯಾಪ್ತಿಗೆ ಬರುವ ರಸ್ತೆಗಳನ್ನು ದುರಸ್ತಿಗೊಳಿಸಬೇಕು.
ಕುಡಿಯುವ ನೀರಿನ ಯೋಜನೆಗಳನ್ನು ಶೀಘ್ರಗತಿಯಲ್ಲಿ ಪೂರ್ಣಗೊಳೀಸಬೇಕು. ಕುಡಿಯುವ ನೀರಿನ ಯೋಜನೆ ಅನುಷ್ಠಾನದಲ್ಲಿ ಯಾವುದೇ ಲೋಪದೋಷ ಕಂಡು ಬಂದಲ್ಲಿ ಸಂಬಂಧಪಟ್ಟ ಅಕಾರಿಯ ವಿರುದ್ಧ ಶಿಸ್ತಿನ ಕ್ರಮಕೈಗೊಳ್ಳಲಾಗುವುದು.
ನಗರದಲ್ಲಿನ ರಿಂಗ್‌ರಸ್ತೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಬದಲಾಗಿ ನಗರಾಭಿವೃದ್ಧಿ ಪ್ರಾಕಾರದಿಂದ ಪೂರ್ಣಗೊಳಿಸಲಾಗುವುದು. ಅದಕ್ಕೆ ಬೇಕಾದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿಕೊಡಬೇಕು. ನಗರಸಭೆಯನ್ನು ಮೇಲ್ದರ್ಜೆಗೇರಿಸಿ ಮಹಾನಗರ ಪಾಲಿಕೆಯನ್ನಾಗಿ ಸರ್ಕಾರದೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಭೈರತಿ ಸುರೇಶ ತಿಳಿಸಿದರು.
ಸಭೆಯಲ್ಲಿ ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು, ಶಾಸಕ ಡಾ.ಶಿವರಾಜ ಪಾಟೀಲ್, ಜಿಲ್ಲಾಕಾರಿ ಚಂದ್ರಶೇಖರ ನಾಯಕ, ಎಸ್ಪಿ ಬಿ.ನಿಖಿಲ್, ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶ, ಸಹಾಯಕ ಆಯುಕ್ತೆ ಮಹೆಬೂಬಿ, ನಗರಸಭೆ ಪೌರಾಯುಕ್ತ ಮಹ್ಮದ್ ಜಿಲಾನಿ, ಆರ್‌ಡಿಎ ಆಯುಕ್ತ ಪ್ರಸನ್ನ ಉಪಸ್ಥಿತರಿದ್ದರು.