

ಎನ್.ಆರ್.ಪುರ: ಮೆಸ್ಕಾಂ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ವಿದ್ಯುತ್ ಕಡಿತ ಮಾಡದರೆ ಗುಣಮಟ್ಟದ ವಿದ್ಯುತ್ ನೀಡಬೇಕು ಎಂದು ವಿದ್ಯುತ್ ಬಳಕೆದಾರರು ಆಗ್ರಹಿಸಿದರು.
ಶನಿವಾರ ಪಿಸಿಎಆರ್‌ಡಿ ಬ್ಯಾಂಕ್ ಆವರಣದಲ್ಲಿ ತಾಲೂಕು ವಿದ್ಯುತ್ ಬಳಕೆದಾರರ ಸಂಘ ಏರ್ಪಡಿಸಿದ್ದ ಸಭೆಯಲ್ಲಿ ವಿದ್ಯುತ್ ಬಳಕೆದಾರರು ಗ್ರಾಮಗಳ ವಿದ್ಯುತ್ ಸಮಸ್ಯೆಗಳನ್ನು ಹೇಳಿಕೊಂಡರು. ವಗ್ಗಡೆ ಮೋಹನ್ ಮಾತನಾಡಿ, ಈಗ ಪರೀಕ್ಷೆಗಾಗಿ ಮಕ್ಕಳು ಓದಿಕೊಳ್ಳುವ ಸಮಯವಾಗಿದ್ದರಿಂದ ಸಂಜೆ 6 ರಿಂದ ರಾತ್ರಿ 10 ರವರೆಗೆ ವಿದ್ಯುತ್ ಕಡಿತಗೊಳಿಸಬಾರದು. ಪ್ರಸ್ತುತ ಹತ್ತಾರು ಬಾರಿ ಕರೆಂಟ್ ಕಡಿತಗೊಳಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಕಾಡಾನೆಗಳ ಹಾವಳಿಯೂ ಇದೆ ಎಂದರು.
ಮೆಸ್ಕಾಂ ಕೊಪ್ಪ ಕಾರ್ಯಪಾಲಕ ಅಭಿಯಂತರ ಸಿದ್ದೇಶ್ ಮಾತನಾಡಿ, 24 ಗಂಟೆಯೂ ಗುಣಮಟ್ಟದ ವಿದ್ಯುತ್‌ನ್ನು ಗ್ರಾಹಕರಿಗೆ ನೀಡಬೇಕು ಎಂಬುದೇ ಮೆಸ್ಕಾಂ ಉದ್ದೇಶ. ಮಕ್ಕಳ ಶಿಕ್ಷಣಕ್ಕೆ ರಾತ್ರಿ ಸಮಯದಲ್ಲಿ ವಿದ್ಯುತ್ ನೀಡಲು ಉದ್ದೇಶಿಸಿದ್ದು, ಆ ಸಮಯದಲ್ಲಿ ಸಿಂಗಲ್ ಫೇಸ್ ವಿದ್ಯುತ್ ನೀಡುತ್ತೇವೆ. ಪ್ರಸ್ತುತ ಮೆಸ್ಕಾಂನಲ್ಲಿ ಶೇ.60 ಲೈನ್‌ಮನ್‌ಗಳ ಕೊರತೆ ಇದೆ. ರಾತ್ರಿ ಸಮಯದಲ್ಲಿ 7 ಗಂಟೆ ವಿದ್ಯುತ್ ನೀಡುತ್ತಿದ್ದೇವೆ. ಮಲೆನಾಡು ಭಾಗದಲ್ಲಿ ಕಾಫಿ, ಅಡಕೆ ಬೆಳೆಗಳಿಗೆ ನೀರಿನ ಅಗತ್ಯ ಇರುವುದರಿಂದ ವಿದ್ಯುತ್ ಸಮರ್ಪಕವಾಗಿ ನೀಡಲು ಪ್ರಯತ್ನ ಮಾಡುತ್ತೇವೆ. ಜನವರಿಯವರೆಗೆ ಸಮಪರ್ಕವಾಗಿ ವಿದ್ಯುತ್ ನೀಡಲಾಗಿತ್ತು. ೆಬ್ರವರಿಯಲ್ಲಿ ಎಲ್ಲರೂ ಪಂಪ್‌ಸೆಟ್ ಉಪಯೋಗಿಸುವುದರಿಂದ ಅನಿವಾರ್ಯವಾಗಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತದೆ ಎಂದು ತಿಳಿಸಿದರು.
ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಗೌತಮ್ ಮಾತನಾಡಿ, ಸಂಜೆ 6 ರಿಂದ ರಾತ್ರಿ 10 ವರೆಗೆ ಸಿಂಗಲ್ ಫೇಸ್ ಪಂಪ್‌ಸೆಟ್ ಆನ್ ಮಾಡಬಾರದು. ಸಿಂಗಲ್ ಪಂಪ್‌ಸೆಟ್ ಆಫ್ ಮಾಡಿದರೆ ಮನೆಗಳಿ,ೆ ಇತರ ವಿದ್ಯುತ್ ಉಪಕರಣಗಳಿಗೆ ಗುಣಮಟ್ಟದ ವಿದ್ಯುತ್ ನೀಡಲು ಸಹಕಾರಿಯಾಗುತ್ತದೆ. ವಿದ್ಯುತ್ ಪಂಪ್‌ಸೆಟ್ ಬಳಕೆದಾರರು ಸಹಕಾರ ನೀಡಬೇಕು ಎಂದರು.
ತಾಲೂಕು ವಿದ್ಯುತ್ ಬಳಕೆದಾರರ ಸಂಘದ ಕಾರ್ಯದರ್ಶಿ ಪಿ.ಕೆ.ಬಸವರಾಜ್ ಮಾತನಾಡಿ, ಅನಧಿಕೃತ ಪಂಪ್‌ಸೆಟ್‌ಗಳನ್ನು ಸರಳವಾದ ದಾಖಲೆ ಪಡೆದು ಸಕ್ರಮ ಮಾಡಿಸಿಕೊಡಬೇಕು. ವಿದ್ಯುತ್ ಲೈನ್‌ನ್ನು ವರ್ಷಕ್ಕೆ ಎರಡು ಬಾರಿ ಕ್ಲಿಯರ್ ಮಾಡಬೇಕು. ಕೆಲವು ಭಾಗದಲ್ಲಿ ವಿದ್ಯುತ್ ತಂತಿಗಳು ಕೆಳಭಾಗದಲ್ಲಿ ಹೋಗಿದ್ದು ಹುಲ್ಲಿನ ಟ್ರಾೃಕ್ಟರ್, ಲಾರಿ ಬಂದರೆ ಅಪಾಯವಾಗಲಿದೆ. ಸೋಲಾರ್ ಅಳವಡಿಸುವ ಬಗ್ಗೆ ಮೆಸ್ಕಾಂ ಪ್ರೋತ್ಸಾಹ ನೀಡಿದರೆ ಮೆಸ್ಕಾಂ ಮೇಲೆ ವಿದ್ಯುತ್ ಒತ್ತಡ ಕಡಿಮೆಯಾಗಲಿದೆ ಎಂದು ಹೇಳಿದರು.
ತಾಲೂಕು ವಿದ್ಯುತ್ ಬಳಕೆದಾರರ ಸಂಘದ ಅಧ್ಯಕ್ಷ ಬಿ.ಕೆ.ಜಾನಕಿರಾಂ, ಕಾರ್ಯದರ್ಶಿ ಪಿ.ಕೆ.ಬಸವರಾಜ್, ಕಾರ್ಯಾಧ್ಯಕ್ಷ ಮಾಳೂರುದಿಣ್ಣೆ ವಿನಾಯಕ, ಕೊಪ್ಪ ಮೆಸ್ಕಾಂ ಕಾರ್ಯಪಾಲಕ ಅಭಿಯಂತರ ಸಿದ್ದೇಶ್, ಎನ್.ಆರ್.ಪುರ ಮೆಸ್ಕಾಂ ಸಹಾಯಕ ಕಾರ್ಯಪಾಲಕ ಗೌತಮ್ ಇತರರಿದ್ದರು.