

ಚಾಮರಾಜನಗರ: ಪ್ರಸ್ತುತ ಸಂದರ್ಭದಲ್ಲಿ ಜಗತ್ತಿನಾದ್ಯಂತ ಡಾ.ಬಿ.ಆರ್.ಅಂಬೇಡ್ಕರ್ ಅವರ ಬರಹಗಳನ್ನು ಅಧ್ಯಯನ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಹಾಯಕ ಕಾರ್ಯದರ್ಶಿ ಭೀಮ್ರಾವ್ ಸಿಂಧೆ ಹೇಳಿದರು.
ನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ತಳಸಮುದಾಯಗಳು ಮೇಲ್ವರ್ಗಗಳಿಂದ ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಮಕ್ಕಳನ್ನು ಕಳೆದುಕೊಂಡರೂ ಯೋಚಿಸದೆ ತಳಸಮುದಾಯದವರ ಪರವಾಗಿ ಹೋರಾಟ ನಡೆಸಿದರು. ಆ ಸಮಯದಲ್ಲಿ ದೇಶಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಅನಿವಾರ್ಯವಾಗಿದ್ದರು. ಆಗಾಗಿ ದೇಶಕ್ಕೆ ಸಮಾನತೆಯ ಸಂವಿಧಾನವನ್ನು ನೀಡಿದರು ಎಂದು ತಿಳಿಸಿದರು.
ಪ್ರಸ್ತುತ ಜಗತ್ತಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬರಹಗಳನ್ನು ಅಧ್ಯಯನ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ವಿದೇಶಿಯರು ಅಂಬೇಡ್ಕರ್ ವಿಚಾರಧಾರೆಗಳ ಕುರಿತು ಹೆಚ್ಚಿನ ಸಂಶೋಧನೆಗಳನ್ನು ಕೈಗೊಳ್ಳುತ್ತಿದ್ದಾರೆ. ಅವರು ಸಂವಿಧಾನಾತ್ಮಕವಾಗಿ ನಮಗೆ ನೀಡಿರುವ ಹಕ್ಕು ಅಧಿಕಾರಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು, ಅಂಬೇಡ್ಕರ್ ಹಾದಿಯಲ್ಲಿ ನಾವು ಸಾಗಬೇಕಿದೆ ಎಂದರು.
ಮೈಸೂರಿನ ವಕೀಲರಾದ ಡಾ.ಪಿ.ಸುಜಾತಾ ಮಾತನಾಡಿ, ಪ್ರಸ್ತುತ ಡಾ.ಬಿ.ಆರ್.ಅಂಬೇಡ್ಕರ್ ರಚನೆಯ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂಬ ಮಾತುಗಳನ್ನಾಡುತ್ತಿರುವುದು ಆತಂಕ ಮೂಡಿಸುತ್ತಿದೆ. ಈ ದೇಶದ ದಲಿತರು, ಹಿಂದುಳಿದವರು ಹಾಗೂ ಮಹಿಳೆಯರಿಗೆ ಹಕ್ಕು, ಅಧಿಕಾರವನ್ನು ಕಲ್ಪಿಸಿದ ಅಂಬೇಡ್ಕರ್ ಸಂವಿಧಾನಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಈ ವೇಳೆ ಸಮುದಾಯದ ಸಾಧಕರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರಾಜ್ಯ ಘಟಕದ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಕೆ.ಸಿ.ಕಿರಣ್, ಗುತ್ತಿಗೆದಾರ ವಾಲೆ ಮಹದೇವ್, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಎಂ.ಕೃಷ್ಣಮೂರ್ತಿ, ಸಂಘದ ಜಿಲ್ಲಾ ಖಜಾಂಚಿ ಎ.ಶಿವಣ್ಣ, ಉಪಾಧ್ಯಕ್ಷ ಕೃಷ್ಣರಾಜು, ಸಂಘಟನಾ ಕಾರ್ಯದರ್ಶಿ ಸಿದ್ದರಾಜು, ಸಹಕಾರ್ಯದರ್ಶಿ ರವಿ, ಪ್ರಧಾನ ಕಾರ್ಯದರ್ಶಿ ಸೋಮಸುಂದರ್, ತಾಲೂಕು ಅಧ್ಯಕ್ಷ ಮುರುಗೇಶ್, ಕಾರ್ಯದರ್ಶಿ ನಾಗರಾಜು, ಖಜಾಂಚಿ ವೃಷಭೇಂದ್ರಪ್ಪ ಹಾಗೂ ಇತರರು ಹಾಜರಿದ್ದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ಶೋಷಿತ ಸಮುದಾಯಗಳ ಸಂಕಷ್ಟಗಳಿಗೆ ನೆರವಾಗುವ ನಿಟ್ಟಿನಲ್ಲಿ ಛಲವಾದಿ ಕ್ಷೇಮಾಭಿವೃದ್ಧಿ ಸಂಘವನ್ನು ಸ್ಥಾಪಿಸಲಾಗಿದೆ. ಈಗಾಗಲೇ ಸಮುದಾಯದ ಹಲವಾರು ಸಮಸ್ಯೆಗಳಿಗೆ ಸ್ಪಂದನೆ ಮಾಡಿದ್ದೇವೆ. ಈ ಮೂಲಕ ಅಂಬೇಡ್ಕರ್ ಆದರ್ಶಗಳಿಗೆ ಜೀವ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ.
-ಎಂ.ಶಿವನಾಗಣ್ಣ, ಜಿಲ್ಲಾಧ್ಯಕ್ಷ, ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘ, ಚಾಮರಾಜನಗರ