ಪ್ರಸ್ತಕ ಸಾಲಿನಲ್ಲಿ ರಾಜ್ಯದಲ್ಲಿ 150 ಅಕ್ಕ ಕೆಫೆ ಸ್ಥಾಪನೆ ಗುರಿ

CTD AKKA KEPE JIMPA -----
Published on

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ರಾಷ್ಟ್ರೀಯ ಜೀವನೋಪಾಯ ಅಭಿಯಾನ (ಗ್ರಾಮೀಣ ಮತ್ತು ನಗರ)ದಡಿ ರಾಜ್ಯಸರ್ಕಾರ ಕಳೆದ ಸಾಲಿನಿಂದ ಜಾರಿಗೊಳಿಸಿರುವ ಮಹತ್ವಾಕಾಂಕ್ಷಿ ಯೋಜನೆಯ ಅಕ್ಕ ಕೆಫೆ ಚಿತ್ರದುರ್ಗದಲ್ಲೂ ಆರಂಭವಾಗಲಿದೆ. ಶೇ.100 ಪ್ರಮಾಣದಲ್ಲಿ ಮಹಿಳೆಯರೇ ಇವುಗಳನ್ನು ನಿರ್ವಹಿಸಲಿದ್ದಾರೆ.

ಕಳೆದ ಹಣಕಾಸು ಸಾಲಿನಲ್ಲಿ 6.79 ಕೋಟಿ ರೂ. ಅನುದಾನದೊಂದಿಗೆ ರಾಜ್ಯದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ 63 ಅಕ್ಕ ಕೆಫೆಗಳ ಪೈಕಿ, ಚಿ ತ್ರದುರ್ಗ ಹಾಗೂ ಹೊಸದುರ್ಗದಲ್ಲಿ ಕೆಫೆಗಳು ಕಾರ್ಯಾರಂಭವಾಗಲಿವೆ. ಪ್ರಸಕ್ತ ಸಾಲಿನಲ್ಲಿ ಹೆಚ್ಚುವರಿ 150 ಅಕ್ಕ ಕೆಫೆಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ. 2024-25ನೇ ಸಾಲಿನಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಕೆಫೆಗಳ ಪೈಕಿ 17 ಕಾರ್ಯಾರಂಭವಾಗಿವೆ. 26 ಪ್ರಗತಿಯಲ್ಲಿದ್ದು, 20 ಕೆಫೆಗಳ ಸ್ಥಾಪನೆ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.

ಅಕ್ಕ ಕೆಫೆ ಸ್ಥಾಪನೆ ಮುಖ್ಯ ಉದ್ದೇಶ ಮಹಿಳಾ ಸ್ವ ಸಹಾಯ ಸಂಘಗಳಿಗೆ, ಆಹಾರ ಪೂರೈಕೆ ಕ್ಷೇತ್ರದಲ್ಲಿ ಸುಸ್ಥಿರ ಜೀವನೋಪಾಯ ಚಟುವಟಿಕೆಗಳನ್ನು ಒದಗಿಸುವುದಾಗಿದೆ. ಗುಣಮಟ್ಟದ ಶುಚಿ, ರುಚಿಯಾದ ಪೌಷ್ಟಿಕ ಆಹಾರವನ್ನು ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಒದಗಿಸಲು ರಾಜ್ಯದಲ್ಲಿ ಒಂದೇ ಮಾದರಿಯಲ್ಲಿ ಕೆಫೆಗಳನ್ನು ಸ್ಥಾಪಿಸಲಾಗುತ್ತಿದೆ.

ಕನಿಷ್ಠ 5 ರಿಂದ ಗರಿಷ್ಠ 10 ಮಹಿಳೆಯರಿಗೆ ಕೆಫೆ ನಿರ್ವಹಣೆ ಜವಾಬ್ದಾರಿ ವಹಿಸಲಾಗುತ್ತದೆ. ಕನಿಷ್ಠ 400 ರಿಂದ 500 ಚದರಡಿ ವಿಸ್ತೀರ್ಣದ ಗರಿಷ್ಠ 7 ಲಕ್ಷ ರೂ.ಅನುದಾನದೊಂದಿಗೆ ಕಿರು ಅಕ್ಕ ಕೆಫೆ(ಕ್ಲಾಸಿಕ್) ಹಾಗೂ ಕನಿಷ್ಠ 501ರಿಂದ 800 ಚದರಡಿ ವಿಸ್ತೀರ್ಣದ 15 ಲಕ್ಷ ರೂ. ಅನುದಾನದೊಂದಿಗೆ ರೆಸ್ಟೋರೆಂಟ್(ಪ್ರೀಮಿಯಂ) ಸ್ಥಾಪಿಸಲಾಗುತ್ತಿದೆ. ಬಿಡುಗಡೆಯಾದ ಅನುದಾನವನ್ನು ಗುರುತಿಸಿದ ಕಟ್ಟಡದ ನವೀಕರಣ, ನೆಲಹಾಸು ವ್ಯವಸ್ಥೆಗೆ, ಬೆಳಕು, ಸಿಸಿ ಕ್ಯಾಮರಾ, ಪೀಠೋಪಕರಣ ಇತ್ಯಾದಿ ಅವಶ್ಯ ಸೌಕರ್ಯಗಳನ್ನು ಒದಗಿಸಲು ಬಳಸಲಾಗುತ್ತದೆ.

ಕೆಫೆ ನಿರ್ವಹಣೆ ಜವಾಬ್ದಾರಿ ಪಡೆಯುವ ಮಹಿಳೆಯರು ಪಾತ್ರೆಗಳು, ಓವನ್ಸ್, ಗ್ಯಾಸ್‌ಸಿಲಿಂಡರ್ ಮತ್ತು ಸ್ಟೌ, ಮಿಕ್ಸಿ ಗ್ರೈಂಡರ್, ರೆಫ್ರಿಜಿರೇಟರ್ ಇತ್ಯಾದಿಗಳನ್ನು ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಶುಚಿ, ರುಚಿ ಕಾಪಾಡಿಕೊಳ್ಳುವುದರೊಂದಿಗೆ ಇವುಗಳ ಮೇಲುಸ್ತುವಾರಿಗೆ ನೇಮಿಸಿರುವ ಜಿಪಂ ಸಿಇಒ ಅಧ್ಯಕ್ಷತೆಯ ಸಮಿತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಪ್ರಗತಿ ಪರಿಶೀಲಿಸಬೇಕಿದೆ ಹಾಗೂ ಕೆಫೆ ನಿರ್ವಹಣೆಗೆ ಸಂಬಂಧಿಸಿದಂತೆ ಎ,ಬಿ,ಸಿ ಶ್ರೇಣಿಯನ್ನು ಕೊಡಬೇಕಿದೆ.

ಯಾವ ಜಿಲ್ಲೆಗೆ ಎಷ್ಟು ಕೆಫೆಗಳು?

ಬಳ್ಳಾರಿ, ಚಿಕ್ಕಬಳ್ಳಾಪುರ, ದಕ್ಷಿಣಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಬೀದರ್, ಕೊಡಗು, ವಿಜಯಪುರ, ಕೊಪ್ಪಳ, ಧಾರವಾಡ, ರಾಯಚೂರು, ಹಾಸನ, ತುಮಕೂರು, ಚಾಮರಾಜನಗರ, ವಿಜಯನಗರ, ಚಿತ್ರದುರ್ಗ, ಹಾವೇರಿ, ಯಾದಗಿರಿ, ಕಲಬುರಗಿ, ಉಡುಪಿ, ಕೋಲಾರ, ಬಾಗಲಕೋಟೆ ಹಾಗೂ ದಾವಣಗೆರೆಯಲ್ಲಿ ತಲಾ 2, ಮೈಸೂರು, ಮಂಡ್ಯ, ಬೆಂಗಳೂರು ನಗರ ತಲಾ 3,ಬೆಂಗಳೂರು ಗ್ರಾಮಾಂತರ 4, ಗದಗ ಮತ್ತು ಬೆಳಗಾವಿ ಜಿಲ್ಲೆಗಳಿಗೆ ತಲಾ ಒಂದೊಂದು ಕೆಫೆಗಳು ಕಳೆದ ಸಾಲಿನಲ್ಲಿ ಮಂಜೂರಾಗಿವೆ.

ಕೋಟ್

ಚಿತ್ರದುರ್ಗದ ಜಿಪಂ ಆವರಣದಲ್ಲಿ ಅಕ್ಕ ಕೆಫೆ ಪ್ರಾರಂಭವಾಗಲಿದೆ. ಇದಕ್ಕಾಗಿ ಹಳೆಯ ಕ್ಯಾಂಟೀನ್ ಕಟ್ಟಡವನ್ನು ಸಜ್ಜುಗೊಳಿಸಲಾಗುತ್ತಿದೆ. ಹೊಸದುರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಸ್ಥಾಪಿಸಲು ಸ್ಥಳ ಗುರುತಿಸಲಾಗಿದೆ. ಶೀಘ್ರದಲ್ಲೇ ಪ್ರಾರಂಭವಾಗಲಿವೆ.

ಎಸ್.ಜೆ. ಸೋಮಶೇಖರ್, ಸಿಇಒ, ಜಿಪಂ, ಚಿತ್ರದುರ್ಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net