ಪ್ರಸ್ತಕ ಶೈಕ್ಷಣಿಕ ವರ್ಷದಿಂದ ಕೆವಿಕೆ ಕಾರ್ಯಾರಂಭ ಅನುಮಾನ?

CTD ADC B.T.KUMARSWAMI-----
Published on

ಚಿತ್ರದುರ್ಗ: ಚಿತ್ರದುರ್ಗದಲ್ಲಿ ಮುಂಬರುವ ಶೈಕ್ಷಣಿಕ ವರ್ಷದಿಂದಲೇ ಕೇಂದ್ರೀಯ ವಿದ್ಯಾಲಯ ಕಾರ್ಯರಂಭ ಮಾಡಲಿದೆ ಎನ್ನುವ ನಿರೀಕ್ಷೆ ಇತ್ತಾದರೂ ಈಚಿನ ಕೆಲವು ಬೆಳವಣಿಗೆಯಿಂದಾಗಿ ವಿಳಂಬವಾಗಲಿದೆಯೇ ಎನ್ನುವ ಅನುಮಾನ ಮೂಡಿದೆ.

ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಕೇಂದ್ರ ಸಂಪುಟ ಹಸಿರು ನಿಶಾನೆ ತೋರಿಸಿದೆ. 2025-2026 ನೇ ಶೈಕ್ಷಣಿಕ ವರ್ಷದಿಂದ ಈ ಶಾಲೆ ದುರ್ಗದಲ್ಲಿ ಪ್ರಾರಂಭವಾಗಲಿದೆ ಎಂದು ಕಳೆದ ಡಿಸೆಂಬರ್‌ನಲ್ಲಿ ಸಂಸದ ಗೋವಿಂದ ಎಂ. ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದ್ದರು. ಶಾಲೆಗೆ ನಗರದ ಹೊರವಲಯದ ಕುಂಚಿಗನಾಳ್ ಬಳಿ 9.30 ಎಕರೆ ಜಾಗ ಗುರುತಿಸಲಾಗಿತ್ತು.

ವಿದ್ಯಾಲಯದ ಸ್ಥಾಪನೆ ಸಂಬಂಧ ಉನ್ನತ ಮಟ್ಟದ ಸಮಿತಿ 2-3 ಬಾರಿ ಸ್ಥಳ ಪರಿಶೀಲನೆ ನಡೆಸಿತ್ತು. ಕೇಂದ್ರ ಸಚಿವರಾಗಿದ್ದ ಎ.ನಾರಾಯಣಸ್ವಾಮಿ ಅವರ ಅವಧಿಯಲ್ಲಿ 2019 ಜೂನ್ 21ರಂದು ಕೇಂದ್ರಕ್ಕೆ ಮರು ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಉದ್ದೇಶಿತ ಸ್ಥಳದಲ್ಲಿದ್ದ ಹೈ-ಟೆನ್ಷನ್ ಮಾರ್ಗವನ್ನೂ ಕೆಪಿಟಿಸಿಎಲ್‌ನಿಂದಲೇ ಅಂದಾಜು 1.10 ಕೋಟಿ ರೂ. ವೆಚ್ಚದಲ್ಲಿ ಸ್ಥಳಾಂತರಿಸಲಾಗಿತ್ತು.

ನಂತರದಲ್ಲಿ ಗೋವಿಂದ ಕಾರಜೋಳ ಅವರು ಕೂಡ ಕೇಂದ್ರ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ್ ಅವರಿಗೆ ವಿದ್ಯಾಲಯ ಮಂಜೂರು ಕೋರಿ ಮನವಿ ಮಾಡಿದ್ದರು. ಈಚೆಗೆ ಕೇಂದ್ರ ಸರ್ಕಾರ ಶಾಲೆ ಸ್ಥಾಪನೆಗೆ ಒಪ್ಪಿಗೆ ಸೂಚಿಸಿತ್ತು. ತಾತ್ಕಾಲಿಕವಾಗಿ ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು ಕಟ್ಟಡದಲ್ಲಿ ತರಗತಿಗಳನ್ನು ಪ್ರಾರಂಭಿಸಲು ಹಾಗೂ ವಿದ್ಯಾಲಯದ ಶೇ. 50 ಬೋಧಕ, ಬೋಧಕೇತರ ಸಿಬ್ಬಂದಿಗೆ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಹಾಸ್ಟೆಲ್‌ನಲ್ಲಿ ವಸತಿ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಿತ್ತು.

ಈ ಸಂಬಂಧ ಕೇಂದ್ರೀಯ ವಿದ್ಯಾಲಯದ ನಿಯೋಜಿತ ಅಧಿಕಾರಿಗಳು, 2025 ರ ಫೆಬ್ರವರಿಯಲ್ಲಿ ಜಿಲ್ಲಾಧಿಕಾರಿಗೆ ಪತ್ರ ಬರೆದು ವಿದ್ಯಾಲಯದ ಹೆಸರಿಗೆ ಜಮೀನು ವರ್ಗಾವಣೆ, ತಾತ್ಕಾಲಿಕ ಕಟ್ಟಡ ಹಸ್ತಾಂತಕ್ಕೆ ಸಂಬಂಧಿಸಿದ ದೃಢೀಕರಣ, ಕಟ್ಟಡದ ಸುರಕ್ಷತೆ ಇತ್ಯಾದಿ ದಾಖಲೆಗಳನ್ನು ಒದಗಿಸುವಂತೆ ಕೋರಿದ್ದರು.

ಆದರೆ, ಏಕಾಏಕಿ ಕಳೆದ ಮಾರ್ಚ್ 7ರಂದು ಜಿಲ್ಲೆಗೆ ಭೇಟಿ ನೀಡಿದ್ದ ಕೇಂದ್ರೀಯ ವಿದ್ಯಾಲಯದ ಸಹಾಯಕ ಆಯುಕ್ತ ಪಿ. ಪ್ರ ಮೋದ್ ನೇತೃತ್ವದ ತಂಡ ಚಿತ್ರದುರ್ಗ ತಾಲೂಕು ಹಿರೇಂಗುಂಟನೂರು ಹೋಬಳಿ ಚಿಕ್ಕಪುರದ ರಿ.ಸ.ನಂ 101ರಲ್ಲಿರುವ 9.36 ಜಮೀನಿನಲ್ಲಿ ಶಾಲೆ ನಿರ್ಮಾಣಕ್ಕೆ ಪರಿಶೀಲಿಸಿದೆ. ಈ ಹಿಂದೆ ವೈದ್ಯಕೀಯ ಕಾಲೇಜಿಗೆಂದು ಈ ಸರ್ವೇ ನಂಬರಿನ 14.17 ಎಕರೆ ಜಾಗವನ್ನು ಈಗ ಕೇಂದ್ರೀಯ ವಿದ್ಯಾಲಯಕ್ಕೆಂದು ಕಾಯ್ದಿರಿಸಿ ಕಂದಾಯ ಇಲಾಖೆ ಆದೇಶಿಸಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರೀಯ ವಿದ್ಯಾಲಯ ಎಲ್ಲಿ ಸ್ಥಾಪನೆಯಾಗಲಿದೆ? ಸ್ಥಳ ಬದಲಾವಣೆ ಯಾಕಾಯಿತು ಎಂಬಿತ್ಯಾದಿ ಪ್ರಶ್ನೆಗಳಿಂದ ಇದೇ ಶೈಕ್ಷಣಿಕ ವರ್ಷದಿಂದ ಈ ಶಾಲೆಗೆ ಪ್ರವೇಶಾತಿ ಆರಂಭವಾಗುವುದರ ಕುರಿತಂತೆ ಅನುಮಾನ ವ್ಯಕ್ತವಾಗಿದೆ. ಕುಂಚಿಗನಾಳ್‌ನಲ್ಲಿ ಕಾಯ್ದಿರಿಸಿದ್ದ ಜಾಗವನ್ನು ವಿದ್ಯಾಲಯಕ್ಕೆ ಕಂದಾಯ ಇಲಾಖೆ ಇನ್ನೂ ಮಂಜೂರು ಮಾಡಿಲ್ಲವೆಂದು ಮೂಲಗಳು ಹೇಳಿವೆ.

ಕೋಟ್

ಇನ್ನೂ ಸ್ಥಳ ಅಂತಿಮವಾಗಿಲ್ಲ

ಯಾವ ಜಾಗದಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪಿಸಬೇಕೆಂಬ ವಿಚಾರ ಇನ್ನೂ ಅಂತಿಮವಾಗಿಲ್ಲ. ಎರಡೂ ಸ್ಥಳಗಳನ್ನೂ ಸಂಬಂಧಿಸಿ ದ ಅಧಿಕಾರಿಗಳು ಪರೀಶೀಲನೆ ನಡೆಸಿದ್ದಾರೆ.

ಬಿ.ಟಿ. ಕುಮಾರಸ್ವಾಮಿ, ಎಡಿಸಿ, ಚಿತ್ರದುರ್ಗ.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net