ಪ್ರಸೂತಿ ವೈದ್ಯೆ ವಿರುದ್ಧ ಕ್ರಮ ಕೈಗೊಳ್ಳಲಿ

22 mlv 3 ಮಾಜಿ ಶಾಸಕ
ಮಾಜಿ ಶಾಸಕ ಡಾ.ಕೆ.ಅನ್ನದಾನಿ.
Published on

ಮಳವಳ್ಳಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಲೋಪದಿಂದ ಅ.20ರಂದು ನವಜಾತ ಶಿಶುವಿನ ಸಾವಿಗೆ ಕಾರಣರಾದ ಪ್ರಸೂತಿ ವೈದ್ಯೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಆಗ್ರಹಿಸಿದರು.

ಇಲ್ಲಿನ ಆಸ್ಪತ್ರೆಯ ಸ್ತ್ರೀರೋಗ ವೈದ್ಯೆ, ಗರ್ಭಿಣಿಯೊಬ್ಬರ ಪ್ರಸೂತಿ ಮಾಡಿಸಲು ಲಂಚಕ್ಕೆ ಬೇಡಿಕೆ ಇಟ್ಟು, ಹಣ ಕೊಡಲು ವಿಳಂಬವಾಯಿತು ಎಂದು ಚಿಕಿತ್ಸೆ ನೀಡಲು ತಡವಾದ ಪರಿಣಾಮ ಶಿಶು ಸಾವನ್ನಪ್ಪಿದೆ ಎಂಬ ವಿಷಯ ಮಾಧ್ಯಮದಲ್ಲಿ ವೀಕ್ಷಿಸಿದೆ. ಇದು ಪ್ರಸ್ತುತ ತಾಲೂಕಿನಲ್ಲಿ ನಡೆಯುತ್ತಿರುವ ಭ್ರಷ್ಟ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ವೈದ್ಯೆಯ ವಿರುದ್ಧ ಈಗಾಗಲೇ ದೂರು ದಾಖಲಾಗಿದ್ದು, ಕೂಡಲೇ ಸಂಬಂಧಪಟ್ಟ ಮೇಲಧಿಕಾರಿಗಳು ಕರ್ತವ್ಯಲೋಪ ಎಸಗಿರುವ ವೈದ್ಯೆಯನ್ನು ಅಮಾನತುಗೊಳಿಸುವ ಜತೆಗೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ತಾಲೂಕಿನಲ್ಲಿ ವೇಶ್ಯಾವಾಟಿಕೆ ದಂಧೆ, ಗಾಂಜಾ ಮಾರಾಟ ಸೇರಿದಂತೆ ಕಳ್ಳತನ, ದರೋಡೆ ಪ್ರಕರಣಗಳು ಎಗ್ಗಿಲ್ಲದೆ ನಡೆಯುತ್ತಿದ್ದರೂ ಇವುಗಳನ್ನು ಹತ್ತಿಕ್ಕಲು ಆಡಳಿಯ ವ್ಯವಸ್ಥೆ ವೈಫಲ್ಯ ಕಂಡಿದೆ ಎಂದು ದೂರಿದರು.

ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತೇನೆಂದು ಅಬ್ಬರಿಸುತ್ತಿದ್ದ ಇಲ್ಲಿನ ಶಾಸಕರು ತಾಲೂಕಿನಲ್ಲಿ ಇಷ್ಟೆಲ್ಲ ಅಕ್ರಮ ಚಟುವಟಿಕೆ ನಡೆಯುತ್ತಿದ್ದರೂ ಎಲ್ಲಿ ಹೋಗಿದ್ದಾರೆ? ಭ್ರಷ್ಟರು,ಕಳ್ಳರು, ದಂಧೆಕೋರರ ರಕ್ಷಣೆ ಮಾಡಿಕೊಂಡು ಕುಳಿತಿದ್ದಾರೆಯೇ? ಎಂದು ಶಾಸಕ ನರೇಂದ್ರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಶಾಸಕರ ಸ್ವಗ್ರಾಮದಲ್ಲೇ ಕಳೆದ ಎರಡು ದಿನಗಳ ಹಿಂದೆ ಸರಣಿ ಕಳ್ಳತನ ನಡೆದಿದೆ. ಪಟ್ಟಣದಲ್ಲಿ ವೇಶ್ಯೆ ವಾಟಿಕೆ, ಗಾಂಜಾ ಮಾರಾಟ ದಂಧೆ ಹಾಗೂ ಸಾರಿಗೆ ಬಸ್ ನಿಲ್ದಾಣದಲ್ಲಿ ಕಳವು ಪ್ರಕರಣಗಳು ಹೆಚ್ಚಿಗಿರುವ ಬಗ್ಗೆ ವಿಜಯವಾಣಿ ಪತ್ರಿಕೆಯಲ್ಲಿ ವಿಸ್ತೃತ ವರದಿ ಪ್ರಕಟವಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡಬೇಕಿದ್ದ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವೈಫಲ್ಯರಾಗಿದ್ದಾರೆ ಎಂದರು.

ಇಲ್ಲಿನ ಶಾಸಕರಿಗೆ ಬಂದೋಬಸ್ತ್ ನೀಡಿ ಬಕೆಟ್ ಹಿಡಿಯುವ ಕೆಲಸದಲ್ಲಿ ಇಲ್ಲಿನ ಡಿವೈಎಸ್‌ಪಿ ಮತ್ತು ಸರ್ಕಲ್ ಇನ್‌ಸ್ಪೆಕ್ಟರ್‌ಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬೆಂಗಳೂರಿಗೆ ತಾಲೂಕಿನ ವ್ಯಾಪ್ತಿಯಿಂದ ಐದನೇ ಹಂತದ ಕುಡಿಯುವ ನೀರಿನ ಯೋಜನೆಗೆ ಇತ್ತೀಚೆಗೆ ಸಿಎಂ ಮತ್ತು ಉಪ ಮುಖ್ಯಮಂತ್ರಿ ಚಾಲನೆ ನೀಡಿದರು. ಆದರೆ ತಾಲೂಕಿನ ವ್ಯಾಪ್ತಿಯ ಹಳ್ಳಿಗಳಿಗೆ ಕುಡಿಯುವ ನೀರಿನ ಸಂಪರ್ಕ ಕೊಡಿಸುವಂತೆ ಸ್ಥಳೀಯ ಶಾಸಕರು ಒತ್ತಾಯಿಸದೇ ಜನರ ಹಿತ ಕಾಯುವಲ್ಲಿ ವಿಫಲರಾಗಿರುವುದು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷ ಜಯಸಿಂಹ, ಸದಸ್ಯ ಟಿ.ನಂದಕುಮಾರ್, ಮುಖಂಡರಾದ ಸಿದ್ದಾಚಾರಿ, ಚಂದಳ್ಳಿ ಶ್ರೀಧರ, ಯತ್ತಂಬಾಡಿ ಪುಟ್ಟರಾಮು, ಸದಾನಂದ, ಕಂಬರಾಜು, ಮೆಹಬೂಬ್ ಪಾಷ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net