ವಿಜಯವಾಣಿ ಸುದ್ದಿಜಾಲ ಧಾರವಾಡ
ವೈದ್ಯಕೀಯ ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದ ಇಲ್ಲಿನ ಮಾಳಮಡ್ಡಿಯ ಪ್ರಶಾಂತ ನರ್ಸಿಂಗ್ ಹೋಂನ ಪ್ರಸೂತಿ ತಜ್ಞೆ ಡಾ. ಸೌಭಾಗ್ಯ ಕುಲಕರ್ಣಿಗೆ 11.10 ಲಕ್ಷ ರೂ. ದಂಡ ವಿಧಿಸಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮಂಗಳವಾರ ಆದೇಶ ಹೊರಡಿಸಿದೆ.
ಶ್ರೀನಗರ ಭಾವಿಕಟ್ಟಿ ಪ್ಲಾಟ್‌ನ ಪರಶುರಾಮ ಘಾಟಗೆ ದೂರು ಸಲ್ಲಿಸಿದ್ದರು. ಪರಶುರಾಮ ಪತ್ನಿ ಪ್ರೀತಿ ಗರ್ಭಿಣಿಯಾದ 3ನೇ ತಿಂಗಳಿಂದ 9ನೇ ತಿಂಗಳವರೆಗೆ ಪ್ರಶಾಂತ ನರ್ಸಿಂಗ್ ಹೋಂನಲ್ಲಿ ತಪಾಸಣೆ ಮಾಡಿಸುತ್ತಿದ್ದರು. ಪ್ರಸೂತಿ ತಜ್ಞರು 2018ರ ಜು. 12ರಿಂದ 2019ರ ಜ. 8ರವರೆಗೆ 5 ಬಾರಿ ಸ್ಕಾೃನಿಂಗ್ ನಡೆಸಿ ಮಗು ಉತ್ತಮವಾಗಿ ಬೆಳೆದಿದ್ದು, ಆರೋಗ್ಯಕರ ಇದೆ ಎಂದು ಹೇಳುತ್ತಿದ್ದರು. 9ನೇ ತಿಂಗಳಲ್ಲಿ ವೈದ್ಯರ ಬಳಿ ತಪಾಸಣೆಗೆ ಹೋದಾಗ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆಗೆ ಸಲಹೆ ನೀಡಿದ್ದರು.
ಹಣಕಾಸಿನ ತೊಂದರೆಯಿಂದ ಪರಶುರಾಮ 2019ರ ಜ. 31ರಂದು ಎಸ್‌ಡಿಎಂ ಆಸ್ಪತ್ರೆಯಲ್ಲಿ ಪತ್ನಿಯ ಹೆರಿಗೆ ಮಾಡಿಸಿದಾಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಮಗುವಿನ ಎರಡೂ ಕಾಲುಗಳು ಅಂಗವಿಕಲತೆಯಿಂದ ಕೂಡಿದ್ದನ್ನು ಕಂಡು ಪಾಲಕರು ಶಾಕ್ ಆಗಿದ್ದರು.
ಸರ್ವೋಚ್ಚ ನ್ಯಾಯಾಲಯದ ತೀರ್ಪು ಹಾಗೂ ಅಲ್ಟ್ರಾಸೌಂಡ್ ಸ್ಕಾೃನ್ ನಿಯಮಾವಳಿ ಪ್ರಕಾರ ಗರ್ಭ ಧಾರಣೆಯ 18-20 ವಾರಗಳ ಸ್ಕಾೃನಿಂಗ್‌ನಲ್ಲಿ ಮಗುವಿನ ಆರೋಗ್ಯ, ಅಂಗಾಂಗಗ ನ್ಯೂನ್ಯತೆಯು ತಪಾಸಣೆ ಮಾಡಿದ ವೈದ್ಯರಿಗೆ ತಿಳಿಯಲಿದೆ. ಸ್ಕಾೃನಿಂಗ್ ನಡೆಸಿದ ಡಾ. ಸೌಭಾಗ್ಯ ಕುಲಕರ್ಣಿಗೆ ಅಂಗವಿಕಲತೆ ಬಗ್ಗೆ ಗೊತ್ತಿದ್ದರೂ ವಿಷಯ ತಿಳಿಸದೆ ಮೋಸ ಮಾಡಿ ವೈದ್ಯಕೀಯ ನಿರ್ಲಕ್ಷ ತೋರಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪರಶುರಾಮ ದೂರು ಸಲ್ಲಿಸಿದ್ದರು.
ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ಪ್ರಸೂತಿ ತಜ್ಞರು ಕಾಲಕಾಲಕ್ಕೆ ಸ್ಕಾೃನಿಂಗ್ ಮಾಡಿ ತಪಾಸಣೆ ನಡೆಸಿದಾಗ ಶಿಶುವಿನ ಅಂಗವಿಕಲತೆ ಗೊತ್ತಾಗುತ್ತದೆ. ಎಂಟಿಪಿ ಕಾಯ್ದೆ ಪ್ರಕಾರ 20 ವಾರಗಳ ಗರ್ಭದ ಸಮಯದಲ್ಲಿ ವೈದ್ಯರಿಗೆ ತಿಳಿದ ಶಿಶುವಿನ ಅಂಗವಿಕಲತೆ ಬಗ್ಗೆ ದೂರುದಾರರ ಗಮನಕ್ಕೆ ತಂದಿದ್ದರೆ, ಕಾನೂನು ಪ್ರಕಾರ ಅಂಗವಿಕಲ ಮಗುವನ್ನು ಗರ್ಭದಲ್ಲಿ ಉಳಿಸಿಕೊಳ್ಳಬೇಕೋ, ಬೇಡವೋ ಎಂದು ನಿರ್ಣಯಿಸುತ್ತಿದ್ದರು. ಆದರೆ ಶಿಶುವಿನ ಅಂಗವಿಕಲತೆ ಮಹತ್ವದ ಸಂಗತಿಯನ್ನು ವೈದ್ಯರು ತಿಳಿಸದೆ ಕರ್ತವ್ಯದಲ್ಲಿ ನಿರ್ಲಕ್ಷತೆ ವಹಿಸಿದ್ದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ನಿರ್ಲಕ್ಷ್ಯತನದಿಂದ ಜನಿಸಿದ ಅಂಗವಿಕಲ ಮಗುವಿನ ಈವರೆಗಿನ ಚಿಕಿತ್ಸೆ, ಭವಿಷ್ಯದ ಚಿಕಿತ್ಸೆ ಮತ್ತು ಭವಿಷ್ಯದ ಜೀವನ ನಿರ್ವಹಣೆ ಬಗ್ಗೆ ಆಯೋಗ ಚಿಂತಿಸಿ, ಮಗುವಿನ ಈವರೆಗಿನ ವೈದ್ಯಕೀಯ ಖರ್ಚಿಗೆ 50 ಸಾವಿರ ರೂ., ದೂರುದಾರರ ಓಡಾಟ ಮತ್ತು ಖರ್ಚು, ವೆಚ್ಚಕ್ಕೆ 50 ಸಾವಿ ರೂ., ಅಂಗವಿಕಲ ಮಗುವಿನ ಪಾಲಕರಿಗಾದ ಮಾನಸಿಕ ನೋವು ಮತ್ತು ಹಿಂಸೆಗೆ 2 ಲಕ್ಷ ರೂ., ಅಂಗವಿಕಲ ಹೆಣ್ಣು ಮಗುವಿನ ಭವಿಷ್ಯದ ವೈದ್ಯಕೀಯ ಖರ್ಚಿಗೆ 3 ಲಕ್ಷ ರೂ., ಮಗುವಿನ ಭವಿಷ್ಯದ ಜೀವನ ನಿರ್ವಹಣೆಗೆ 5 ಲಕ್ಷ ರೂ. ಪ್ರಕರಣದ ಖರ್ಚಾಗಿ 10 ಸಾವಿ ರೂ. ಸೇರಿ ಒಟ್ಟು 11.10 ಲಕ್ಷ ರೂ. ಪರಿಹಾರ ನೀಡುವಂತೆ ತೀರ್ಪು ನೀಡಿದೆ. ಒಂದು ತಿಂಗಳೊಳಗೆ ಪರಿಹಾರ ಹಣ ನೀಡದಿದ್ದರೆ ಒಟ್ಟು ಮೊತ್ತಕ್ಕೆ ಶೇ.8ರಷ್ಟು ಬಡ್ಡಿ ಕೊಡುವಂತೆ ಆದೇಶಿಸಿದೆ.
ಇದಲ್ಲದೆ ಪರಿಹಾರ ಮೊತ್ತದಲ್ಲಿ 8 ಲಕ್ಷ ರೂ. ಹಣವನ್ನು ಅಲ್ಪವಯಿ ಅಂಗವಿಕಲ ಹೆಣ್ಣು ಮಗುವಿನ ಹೆಸರಿನಲ್ಲಿ ಅವಳು ವಯಸ್ಕಳಾಗುವವರೆಗೆ ದೂರುದಾರರು ಇಚ್ಚಿಸುವ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಖಾಯಂ ಠೇವಣಿ ಇಡಲು ಮತ್ತು ಪರಿಹಾರದ ಪೂರ್ತಿ ಹಣವನ್ನು ಅಂಗವಿಕಲ ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ಖರ್ಚು ಮಾಡಲು ಆಯೋಗ ಸೂಚಿಸಿದೆ.