ಪ್ರಸನ್ನ ಗಣಪತಿಗೆ ಭಕ್ತರಿಂದ ಜೈಕಾರ

Prasanna Ganapathi
Published on

ಚಿತ್ರದುರ್ಗ: ನಗರದ ಪ್ರಸನ್ನ ಗಣಪತಿಯ 67ನೇ ವರ್ಷದ ವಿಸರ್ಜನಾ ಮಹೋತ್ಸವದ ಅಂಗವಾಗಿ ಭಾನುವಾರ ರಾಜಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು.

ಗಣೇಶೋತ್ಸವ ಅಂಗವಾಗಿ ಆನೆಬಾಗಿಲು ಸಮೀಪದ ಸುವೃಷ್ಠಿ ಆಂಜನೇಯಸ್ವಾಮಿ ದೇಗುಲ ಆವರಣದಲ್ಲಿ ಪ್ರಸನ್ನ ಗಣಪತಿ ಸೇವಾ ಸಮಿತಿಯಿಂದ 10 ದಿನ ಪ್ರತಿಷ್ಠಾಪಿಸಿದ್ದ ಪ್ರಸನ್ನ ಗಣಪತಿ ಸನ್ನಿಧಿಯಲ್ಲಿ ನಿತ್ಯ ವಿವಿಧ ಪೂಜಾ ಕೈಂಕರ್ಯ ಶಾಸ್ತ್ರೋಕ್ತವಾಗಿ ನೆರವೇರಿದವು.

ಪ್ರಸನ್ನ ಗಣಪತಿ ಮೆರವಣಿಗೆಯೂ ಆನೆಬಾಗಿಲಿನಿಂದ ಹೊರಟು ಗಾಂಧಿ, ಎಸ್‌ಬಿಐ ವೃತ್ತ, ಧರ್ಮಶಾಲಾ ರಸ್ತೆ, ದೊಡ್ಡಪೇಟೆ, ಚಿಕ್ಕಪೇಟೆ, ಬುರುಜನಹಟ್ಟಿ, ಹೊಳಲ್ಕೆರೆ ರಸ್ತೆ ಮಾರ್ಗವಾಗಿ ತಡರಾತ್ರಿವರೆಗೂ ಸಂಚರಿಸಿ, ಚಂದ್ರವಳ್ಳಿ ತಲುಪಿತು.

ನಾಸಿಕ್‌ಡೋಲು, ಉರುಮೆ, ಡೊಳ್ಳು ಕುಣಿತ, ಕೀಲುಕುದುರೆ, ಗೊಂಬೆ ವೇಷಧಾರಿಗಳು ಸೇರಿ ವಿವಿಧ ಜನಪದ ಕಲಾತಂಡಗಳು ಮೆರುಗು ನೀಡಿದವು. ಶಾರದಾ ಬ್ರಾೃಸ್‌ಬ್ಯಾಂಡ್‌ನ ಗುರುಮೂರ್ತಿ ತಂಡ ಭಕ್ತಿ ಮತ್ತು ಚಿತ್ರಗೀತೆಗಳನ್ನು ಹಾಡುವ ಮೂಲಕ ದಾರಿಹೋಕರನ್ನು ಆಕರ್ಷಿಸಿದರು.

ಗಣಪತಿ ಬಪ್ಪಾ ಮೋರಯಾ.. ಮಂಗಳ ಮೂರ್ತಿ ಮೋರಯಾ ಎಂಬ ನೂರಾರು ಭಕ್ತರ ಜಯಘೋಷಗಳೊಂದಿಗೆ ಮೆರವಣಿಗೆ ಸಂಪನ್ನಗೊಂಡಿತು.

ಮೆರವಣಿಗೆಗೆ ಡಾ.ಮಲ್ಲಿಕಾರ್ಜುನ್ ಕೀರ್ತಿ ಚಾಲನೆ ನೀಡಿದರು. ವಕ್ಫ್ ಬೋರ್ಡ್ ಅಧ್ಯಕ್ಷ ಎಂಸಿಒ ಬಾಬು, ಉತ್ಸವ ಸಮಿತಿ ಅಧ್ಯಕ್ಷ ಗೋಪಾಲ್‌ರಾವ್ ಜಾಧವ್, ಉಪಾಧ್ಯಕ್ಷರಾದ ರಾಜ್‌ಕುಮಾರ್, ನಾಗರಾಜ್‌ಬೇದ್ರೆ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ಆನಂದ್, ಸಹ ಕಾರ್ಯದರ್ಶಿಗಳಾದ ಶ್ಯಾಂಪ್ರಸಾದ್, ನಾರಾಯಣರಾವ್, ನಿರ್ದೇಶಕರಾದ ಸಿದ್ದಲಿಂಗೇಶ್, ಗಜೇಂದ್ರ, ವೆಂಕಟೇಶ್, ಶಂಭು, ಕಾರ್ಯಕರ್ತರಾದ ಯಶವಂತ್, ವಿದ್ಯಾನಂದ ಲಾಡ್, ರವಿಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net