

ಚಿತ್ರದುರ್ಗ: ನಗರದಲ್ಲಿ 66ನೇ ವರ್ಷದ ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವದ ಮೆರವಣಿಗೆಗೆ ಶುಕ್ರವಾರ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.
ಗಣೇಶೋತ್ಸವ ಅಂಗವಾಗಿ ಆನೆಬಾಗಿಲು ಸಮೀಪದ ಸುವೃಷ್ಠಿ ಆಂಜನೇಯಸ್ವಾಮಿ ದೇಗುಲ ಆವರಣದಲ್ಲಿ ಪ್ರಸನ್ನ ಗಣಪತಿ ಸೇವಾ ಸಮಿತಿಯಿಂದ 12 ದಿನ ಪ್ರತಿಷ್ಠಾಪಿಸಿದ್ದ ಪ್ರಸನ್ನ ಗಣಪತಿ ಸನ್ನಿಧಿಯಲ್ಲಿ ನಿತ್ಯ ವಿವಿಧ ಪೂಜಾ ಕೈಂಕರ್ಯ ಶಾಸ್ತ್ರೋಕ್ತವಾಗಿ ನೆರವೇರಿದವು.
ಸ್ವಾಮಿಯ ಮೂರ್ತಿಯನ್ನು ಐತಿಹಾಸಿಕ ಚಂದ್ರವಳ್ಳಿ ಕೆರೆ ಸಮೀಪದ ಬಾವಿಯಲ್ಲಿ ಶುಕ್ರವಾರ ತಡರಾತ್ರಿ ಕ್ರೇನ್ ಸಹಾಯದಿಂದ ವಿಸರ್ಜಿಸುವ ಮೂಲಕ ಮಹೋತ್ಸವ ಸಂಪನ್ನಗೊಳಿಸಲಾಯಿತು. ಇದಕ್ಕೂ ಮುನ್ನ ಪ್ರಸನ್ನ ಗಣಪತಿ ಮೆರವಣಿಗೆಯೂ ಆನೆಬಾಗಿಲಿನಿಂದ ಹೊರಟು ಗಾಂಧಿವೃತ್ತ, ಧರ್ಮಶಾಲಾ ರಸ್ತೆ, ದೊಡ್ಡಪೇಟೆ, ಚಿಕ್ಕಪೇಟೆ, ಬುರುಜನಹಟ್ಟಿ, ಹೊಳಲ್ಕೆರೆ ರಸ್ತೆ ಮಾರ್ಗವಾಗಿ ತಡರಾತ್ರಿವರೆಗೂ ಸಂಚರಿಸಿತು.
ನಾಸಿಕ್‌ಡೋಲು, ಡೊಳ್ಳುಕುಣಿತ, ಕೀಲುಕುದುರೆ ಸೇರಿ ವಿವಿಧ ಜನಪದ ಕಲಾತಂಡಗಳು ಮೆರುಗು ನೀಡಿದವು. ಶಾರದಾ ಬ್ರಾಸ್‌ಬ್ಯಾಂಡ್‌ನ ಗುರುಮೂರ್ತಿ ತಂಡದವರು ಭಕ್ತಿ ಮತ್ತು ಚಿತ್ರಗೀತೆಗಳನ್ನು ಹಾಡುವ ಮೂಲಕ ದಾರಿಹೋಕರನ್ನು ಆಕರ್ಷಿಸಿದರು.
ಗಣಪತಿ ಬಪ್ಪಾ ಮೋರಯಾ.. ಮಂಗಳ ಮೂರ್ತಿ ಮೋರಯಾ… ಎಂಬ ನೂರಾರು ಭಕ್ತರ ಜಯಘೋಷಗಳೊಂದಿಗೆ ಮೆರವಣಿಗೆ ಸಂಪನ್ನಗೊಂಡಿತು.
ಸಮಿತಿ ಅಧ್ಯಕ್ಷ ಗೋಪಾಲ್‌ರಾವ್ ಜಾಧವ್, ಉಪಾಧ್ಯಕ್ಷರಾದ ರಾಜ್‌ಕುಮಾರ್, ನಾಗರಾಜ್‌ಬೇದ್ರೆ, ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ಆನಂದ್, ನಿರ್ದೇಶಕರಾದ ವೆಂಕಟೇಶ್, ಶಂಭು, ಯಶವಂತ್, ಕಾರ್ತಿಕ್, ರಮೇಶ್, ನಾರಾಯಣರಾವ್, ಶ್ಯಾಂಪ್ರಸಾದ್ ಇತರರಿದ್ದರು.