ಪ್ರಸಕ್ತ ಶೈಕ್ಷಣಿಕ ವರ್ಷದಿಂದ ನುಗ್ಗೇಹಳ್ಳಿ ವಸತಿ ಶಾಲೆ ಆರಂಭ- ಡಿಸಿ ಸತ್ಯಭಾಮ

06 CRP-2A, DC 2
Published on

ಚನ್ನರಾಯಪಟ್ಟಣ: ನುಗ್ಗೇಹಳ್ಳಿ ಮೊರಾರ್ಜಿ ವಸಿತಿ ಶಾಲೆ ಕಟ್ಟಡ ಕಾಮಗಾರಿ ಪೂರ್ಣವಾಗಿದ್ದು,   ಈ  ಶೈಕ್ಷಣಿಕ ವರ್ಷದಿಂದ ವಸತಿ ಶಾಲೆ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಭರವಸೆ ನೀಡಿದರು.

ತಾಲೂಕಿನ ನುಗ್ಗೇಹಳ್ಳಿ ಹೋಬಳಿ ಸೋಮವಾರ ಸಂತೆ ಸಮೀಪದಲ್ಲಿ ಸುಮಾರು 13 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಿರುವ ಮೊರಾರ್ಜಿ ವಸತಿ ಶಾಲೆ ವೀಕ್ಷಿಸಿ ರೈತರು, ಗುತ್ತಿಗೆದಾರ ಸಂಧಾನ ಸಭೆ ಮಾಡಿ ಮಾತನಾಡಿದರು.  ಕಂದಾಯ ಇಲಾಖೆಯಿಂದ 8.17 ಎಕರೆ ಸರ್ಕಾರಿ ಭೂಮಿ ಸರ್ವೆ ಮಾಡಿ ಗುತ್ತಿಗೆದಾರರಿಗೆ ವಸತಿ ಶಾಲೆಯ ಕಟ್ಟಡ ನಿರ್ಮಾಣ ಮಾಡಲು ಅವಕಾಶ ನೀಡಲಾಗಿದೆ. ಸರ್ಕಾರ ನಿಗಧಿತ ಅವಧಿಯಲ್ಲಿ ಕಾಮಗಾರಿ ಮಾಡಿಸಲಾಗಿದೆ ಆದರೆ ಕೃಷಿ ಭೂಮಿಗೆ ತೆರಳಲು ರಸ್ತೆ ನೀಡುವಂತೆ ಕೆಲ ರೈತರು ಗೊಂದಲ ಸೃಷ್ಟಿಸಿದ್ದರು, ಇದರೊಂದಿಗೆ ಓರ್ವ ರೈತ ತನ್ನ ಒಂದು ಎಕರೆ ಕೃಷಿ ಭೂಮಿ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡಿದ್ಧಾರೆ ಎಂದು ತಾಲೂಕು ಆಡಳಿತಕ್ಕೆ ಅರ್ಜಿ ನೀಡಿದ್ದರು. ಹಾಗಾಗಿ ಸ್ಥಳಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದಿದ್ದೇನೆ ಎಂದರು.

ರೈತರಿಗೆ ಕೃಷಿ ಭೂಮಿ ಮಂಜೂರಿ ಚೀಟಿ ನೀಡಲಾಗಿದೆ ಆದರೆ ಇದೇ ಜಾಗದಲ್ಲಿ ಇದೆ ಎನ್ನುವುದಕ್ಕೆ ನಕ್ಷೆ ಇಲ್ಲ, ರೈತ ಕೂಡ ಹದ್ದುಬಸ್ತು ಮಾಡಿಸಿಕೊಂಡಿಲ್ಲ, ಸ್ಯಾಟ್‌ಲೈಟ್ ಸರ್ವೆ ಹಾಗೂ ಭೂಮಾಪನ ಇಲಾಖೆಯಡಿ ಸರ್ವೆ ಮಾಡಿದಾಗ ರೈತರ ಯಾವುದೇ ಭೂಮಿ ಒತ್ತುವರಿಯಾಗಿರುವುದು ಕಂಡು ಬಂದಿಲ್ಲ, ಹಾಗಾಗಿ ಗುತ್ತಿಗೆದಾರ ಇಂದಿನಿಂದ ಕಾಮಗಾರಿ ಮಾಡಬಹದು ಇದನ್ನು ಯಾರು ಅಡ್ಡಿ ಪಡಿಸುವಂತ್ತಿಲ್ಲ ಎಂದು ಆದೇಶಿಸಿದರು.

ಕ್ರೈಸ್ ಇಡಿ ಕಾಂತರಾಜು ಮಾತನಾಡಿ, ಈಗಾಗಲೇ ಮಕ್ಕಳ ಅನುಕೂಲಕ್ಕಾಗಿ ಕಟ್ಟಡವನ್ನು ಬಳಕೆ ಮಾಡಿಕೊಳ್ಳಬೇಕಾಗಿತ್ತು. ಜಾಗದ ವಿಚಾರವಾಗಿ ಸ್ಥಳೀಯರ ತಗಾದೆ ಇದ್ದ ಕಾರಣ, ಕಟ್ಟಡದ ಕಾಮಗಾರಿ ಸಂಪೂರ್ಣ ಮುಗಿದಿದ್ದರೂ, ಕಾಂಪೌಂಡ್ ಪೂರ್ಣವಾಗಿರಲಿಲ್ಲ, ಇದೀಗ ಇರುವ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳು ಆಗಮಿಸಿ ರೈತರನ್ನು ಮನವೊಲಿಸಿ ಪರಿಹರಿಸಲಾಗಿದೆ. ಕಾಂಪೌಂಡ್ ಸೇರಿ ಇರುವ ಸಣ್ಣಪುಟ್ಟ ಕಾಮಗಾರಿಯನ್ನು 15 ದಿನಗಳಲ್ಲಿ ಮುಗಿಸಿ ಕ್ರೈಸ್ ಗೆ ಹಸ್ತಾಂತರಿಸುವಂತೆ ಗುತ್ತಿಗೆದಾರನಿಗೆ ಸೂಚಿಸಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಮಕ್ಕಳನ್ನು ಇಲ್ಲಿಗೆ ಸ್ಥಳಾಂತರಿಸಿ ವಸತಿಶಾಲೆ ಆರಂಭಿಸಲಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net