

ಹುಬ್ಬಳ್ಳಿ: ಹುಬ್ಬಳ್ಳಿ ತಾಪಂ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯಡಿ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಉಮಚಗಿ ಗ್ರಾಪಂ ವ್ಯಾಪ್ತಿಯಲ್ಲಿ ರೈತರ ಹೊಲದಲ್ಲಿ ಬದು ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕೋವಿಡ್-19 ಜಾಗೃತಿಯ ಪ್ರತಿಜ್ಞಾ ವಿಧಿ ಬೋಧಿಸಿ ಕೂಲಿ ಕಾರ್ವಿುಕರಿಗೆ ನರೇಗಾ ಯೋಜನೆಯ ಕಾಯಕ ಮಿತ್ರ ಆಪ್ ಹಾಗೂ ಕೋವಿಡ್-19 ಪಂಚ ಸೂತ್ರಗಳನ್ನು ವಿವರಿಸಿದರು. ಪರಸ್ಪರ ಅಂತರ ಕಾಪಾಡಿಕೊಂಡು ಕೆಲಸ ನಿರ್ವಹಿಸಲಾಗುತ್ತಿದೆ.
ತಾಪಂ ಸಹಾಯಕ ನಿರ್ದೇಶಕ ಗಂಗಾಧರ ಕಂದಕೂರ ಮಾತನಾಡಿ, 2020-21ನೇ ಸಾಲಿಗೆ 4.60 ಲಕ್ಷ ಮಾನವ ದಿನಗಳ ಗುರಿ ನಿಗದಿ ಮಾಡಲಾಗಿದೆ. ಇದುವರೆಗೆ 11ರಿಂದ 12 ಸಾವಿರ ಮಾನವ ದಿನಗಳ ಸೃಜನೆ ಮಾಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ತಾಲೂಕಿನಾದ್ಯಂತ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕೃಷಿ ಹೊಂಡ, ಬದು, ದನದ ಕೊಟ್ಟಿಗೆ, ಆಶ್ರಯ ಮನೆಗಳ ನಿರ್ವಣಕ್ಕೆ 90 ಮಾನವ ದಿನಗಳನ್ನು ನೀಡಲಾಗುತ್ತಿದೆ ಎಂದರು.
ಮುಂದಿನ ಜೂನ್ ಅಂತ್ಯದ ವೇಳೆಗೆ ಎಲ್ಲ ಕೃಷಿ ಹೊಂಡ, ಬದು ಹಾಗೂ ಚೆಕ್ ಡ್ಯಾಮ್ಳನ್ನು ಪೂರ್ಣಗೊಳಿಸಿ ಮಳೆ ನೀರನ್ನು ಸಂಗ್ರಹಿಸಲು ಯೋಜನೆ ರೂಪಿಸಲಾಗಿದೆ. ಸರ್ಕಾರದ ಆದೇಶದಂತೆ ಎಲ್ಲ ಕೂಲಿಕಾರರಿಗೆ ನರೇಗಾದಡಿ ಕೆಲಸ ನೀಡಲಾಗಿದೆ. 275 ರೂ. ದಿನದ ಕೂಲಿ ಹಾಗೂ ಸಲಕರಣೆ ವೆಚ್ಚ 10 ರೂ. ಸೇರಿ ಒಟ್ಟು 285 ರೂ. ನೀಡಲಾಗುತ್ತಿದೆ.
ಕೊವೀಡ್-19ರ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಸೇರಿ ಇತರ ನಗರಗಳಿಂದ ಹಳ್ಳಿಗೆ ಬಂದಿರುವ ಜನರಿಗೆ ನರೇಗಾದಡಿ ಕೆಲಸ ನೀಡುತ್ತಿರುವುದು ವರದಾನವಾಗಿದೆ ಎಂದು ಹೇಳಿದರು.
ಉಮಚಗಿ ಗ್ರಾಮದ ರೈತ ಶಿವಾನಂದ ಕಟಗಿ ಮಾತನಾಡಿ, ಗ್ರಾಮದ ಸರ್ವೆ ನಂಬರ್ 84ರಲ್ಲಿರುವ 4.19 ಗುಂಟೆ ಜಮೀನಿನಲ್ಲಿ ನರೇಗಾದಡಿ ಬದು ನಿರ್ವಣಕ್ಕೆ ಕೆಲಸ ನೀಡಲಾಗಿದೆ. ಇದರಿಂದ ಮಣ್ಣಿನ ಸವೆತ ತಪ್ಪಿ, ಫಲವತ್ತತೆ ಹೆಚ್ಚಾಗುತ್ತದೆ. ಇದರಿಂದ ಉತ್ತಮ ಬೆಳೆ ಬರಲು ಸಹಾಯವಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು. ಕಾರ್ವಿುಕ ಮಲ್ಲಿಕಾರ್ಜುನ ಮಾತನಾಡಿ, ಕರೊನಾ ಹಿನ್ನೆಲೆಯಲ್ಲಿ ಜನರು ಬೇರೆ ಸ್ಥಳಗಳಿಗೆ ತೆರಳಿ ಕೆಲಸ ನಿರ್ವಹಿಸುವುದು ದುಸ್ತರವಾಗಿದೆ. ನರೇಗಾ ಕೆಲಸದಿಂದ ಜೀವನ ನಿರ್ವಹಣೆಗೆ ನೆರವಾಗಲಿದೆ ಎಂದು ಹೇಳಿದರು.
ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾದಡಿ ಕೆಲಸ ನೀಡಲಾಗಿದೆ. 150ರಿಂದ 200 ಕೂಲಿಕಾರರು ಕೆಲಸ ನಿರ್ವಹಿಸುತ್ತಿದ್ದಾರೆ. ವಾರದ ಒಳಗಾಗಿ ಕೂಲಿ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಗ್ರಾಪಂ ವ್ಯಾಪ್ತಿಯಲ್ಲಿ 25ರಿಂದ 30 ರೈತರ ಹೊಲದಲ್ಲಿ ಬದು ನಿರ್ವಣಕ್ಕೆ ಅನುಮೋದನೆ ನೀಡಲಾಗಿದೆ. ಇನ್ನೂ ಹೆಚ್ಚಿನ ರೈತರ ಹೊಲಗಳಲ್ಲಿ ಬದು ನಿರ್ವಣಕ್ಕೆ ಅನುಮೋದನೆ ನೀಡಲಾಗುವುದು. ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.| ದಾವಲ್ ಸಾಬ್ ಪಿಂಜಾರು ಪಿಡಿಒ